ಹೊಸದಿಗಂತ ಡಿಜಿಟಲ್ ಡೆಸ್ಕ್ :
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತೀಯ ಪೌರತ್ವದ ಕುರಿತು ಕೇಂದ್ರ ಸರ್ಕಾರದ ನಿಲುವನ್ನು ತಿಳಿಸುವಂತೆ ಗೃಹ ಸಚಿವಾಲಯಕ್ಕೆ ದೆಹಲಿ ಹೈಕೋರ್ಟ್ ಶುಕ್ರವಾರ ಸೂಚಿಸಿದೆ.
ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ ಮನವಿಯ ಕುರಿತ ವಿಚಾರಣೆ ವೇಳೆ ದೆಹಲಿ ಹೈಕೋರ್ಟ್ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ಪೀಠವು, ಕೇಂದ್ರದ ನಿಲುವನ್ನು ತಿಳಿಸುವಂತೆ ಕೇಂದ್ರ ಸರ್ಕಾರದ ಪ್ರಾಕ್ಸಿ ವಕೀಲರಿಗೆ ಮೌಖಿಕವಾಗಿ ಕೇಳಿದೆ.’ನಾವು ಯಾವುದೇ ಆದೇಶವನ್ನು ನೀಡುವ ಮೊದಲು ನಾವು ರಾಜ್ಯದ ವಕೀಲರ ಸಹಾಯವನ್ನು ಹೊಂದಲು ಬಯಸುತ್ತೇವೆ’ ಎಂದು ಪೀಠವು ತೀಳಿಸಿತ್ತು.
ಪ್ರಕರಣದ ಪ್ರಾರಂಭದಲ್ಲಿ ನ್ಯಾಯಾಲಯವು ಅರ್ಜಿಯ ಮೇಲೆ ನೋಟಿಸ್ ನೀಡಲು ಒಲವು ತೋರಿತ್ತು. ಆದರೆ ಈ ವಿಷಯದಲ್ಲಿ ಹಿಂದೆ ಸರ್ಕಾರವನ್ನು ಪ್ರತಿನಿಧಿಸುತ್ತಿದ್ದ ವಕೀಲರನ್ನು ಹಿರಿಯ ವಕೀಲರನ್ನಾಗಿ ನೇಮಿಸಲಾಗಿದೆ ಎಂದು ಕೇಂದ್ರದ ಪ್ರಾಕ್ಸಿ ವಕೀಲರು ತಿಳಿಸಿದ್ದರು. ಹೀಗಾಗಿ ಪ್ರಕರಣದಲ್ಲಿ ಹೊಸ ವಕೀಲರನ್ನು ನೇಮಿಸಲು ಸ್ವಲ್ಪ ಕಾಲಾವಕಾಶ ಕೋರಿದರು. ನಂತರ ಪ್ರಕರಣವನ್ನು ಪೀಠವು ಜನವರಿ 13, 2025 ರಂದು ಮುಂದೂಡಿತ್ತು.
ವಕೀಲ ಸತ್ಯ ಸಬರ್ವಾಲ್ ಸಲ್ಲಿಸಿದ ಸುಬ್ರಮಣಿಯನ್ ಸ್ವಾಮಿ ಅವರ ಮನವಿಯಲ್ಲಿ, ಆಗಸ್ಟ್ 6, 2019 ರಂದು, ಗಾಂಧಿ ಅವರು ಬ್ರಿಟಿಷ್ ಸರ್ಕಾರಕ್ಕೆ ತನ್ನ ಪೌರತ್ವದ ಕುರಿತು ಸ್ವಯಂಪ್ರೇರಿತವಾಗಿ ಬಹಿರಂಗಪಡಿಸಿದ್ದಾರೆ ಎಂದು ಆರೋಪಿಸಿ ಸಚಿವಾಲಯಕ್ಕೆ ಪತ್ರವನ್ನು ಕಳುಹಿಸಲಾಗಿದೆ, ಅಷ್ಟೇ ಅಲ್ಲದೆ ಅವರು ಬ್ರಿಟಿಷ್ ರಾಷ್ಟ್ರೀಯತೆಯ ನಾಗರಿಕತ್ವ ಮತ್ತು ಬ್ರಿಟಿಷ್ ಪಾಸ್‌ಪೋರ್ಟ್ ಅನ್ನು ಸಹ ಹೊಂದಿದ್ದಾರೆ ಎಂದು ಹೇಳಿದರು.
ಇದಕ್ಕೂ ಮೊದಲು ಅಲಹಾಬಾದ್ ಹೈಕೋರ್ಟ್ ಸಹ ಭಾರತ ಮತ್ತು ಬ್ರಿಟನ್ ಪೌರತ್ವ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತೀಯ ಪೌರತ್ವವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿರುವ ಮನವಿಯ ಬಗ್ಗೆ ನಿರ್ಧರಿಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಸೂಚಿಸಿ, ಮುಂದಿನ ವಿಚಾರಣೆಯು ಡಿಸೆಂಬರ್ 19 ಕ್ಕೆ ಮುಂದೂಡಿತ್ತು.