ಹೊಸದಿಗಂತ ಡಿಜಿಟಲ್ ಡೆಸ್ಕ್:
ರೋಹಿತ್ ವೇಮುಲಾ ಕಾಯ್ದೆ ಜಾರಿ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ರಾಹುಲ್ ಗಾಂಧಿ ದೇಶದ ಒಳಿತಿಗೆ ರಾಜಕೀಯ ಮಾಡುತ್ತಿಲ್ಲ, ವೋಟ್ ಬ್ಯಾಂಕ್ ರಾಜಕೀಯದ ಮೇಲೆ ಮಾತ್ರ ಗಮನ ಹರಿಸಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ರೋಹಿತ್ ವೇಮುಲ ಕಾಯ್ದೆ ಜಾರಿಗೆ ತರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವುದೂ ವೋಟ್ ಬ್ಯಾಂಕ್ ರಾಜಕೀಯದ ಒಂದು ಭಾಗ ಎಂದು ಟೀಕಿಸಿದ್ದಾರೆ.
ಜಾತಿ ಗಣತಿ ವಿವಾದ, ಆಡಳಿತ ವೈಫಲ್ಯ ಮರೆಮಾಚಲು ಕಾಂಗ್ರೆಸ್ ಸರ್ಕಾರ ಏನಾದರೊಂದು ವಿಷಯಾಂತರ ಮಾಡುತ್ತಲೇ ಇರುತ್ತದೆ, ಈಗ ವೇಮುಲ ಕಾಯ್ದೆ ಸಹ ಅದೇ ತರಹದ್ದು ಎಂದರು.
ಜಾತಿ ಗಣತಿ ಕುರಿತು ಪ್ರತಿಕ್ರಿಯಿಸಿ, ಜಾತಿ ಜನಗಣತಿ ಹೆಸರಲ್ಲಿ ಜನರಲ್ಲಿ ಗೊಂದಲ ಮೂಡಿಸಲಾಗುತ್ತಿದೆ. ಸಿದ್ದರಾಮಯ್ಯ ಅವರೇ ಜಾತಿ ಗಣತಿ ಅಲ್ಲ ಅಂದಿದ್ದಾರೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಅಂತ ಹೇಳಿದ್ದಾರೆ. ಜಾತಿ ಗಣತಿ ಎಂದು ಯಾರ ಮನೆಗೆ ಭೇಟಿ ನೀಡಿ ಸಮೀಕ್ಷೆ ಮಾಡಿದ್ದಾರೆ? ರಾಜ್ಯದಲ್ಲಿ ಒಬ್ಬರೇ ಒಬ್ಬರ ಮನೆಗೂ ತೆರಳಿಲ್ಲ. ಇದು ಜಾತಿ ಗಣತಿಯಲ್ಲ ಆರ್ಥಿಕ ಸಮೀಕ್ಷೆ ಎಂದರು.