ರಾಹುಲ್ ಗಾಂಧಿ ಪಾಕಿಸ್ತಾನದಲ್ಲಿ ಅತ್ಯಂತ ಜನಪ್ರಿಯರು, ಅಲ್ಲೇ ಚುನಾವಣೆಗೆ ಸ್ಪರ್ಧೆ ಮಾಡಲಿ: ಆಚಾರ್ಯ ಪ್ರಮೋದ್​ ಕೃಷ್ಣಮ್

ಹೊಸದಿಗಂತ ಡಿಜಿಟಲ್ ಡೆಸ್ಕ್: 

ರಾಹುಲ್ ಗಾಂಧಿ ಪಾಕಿಸ್ತಾನದಲ್ಲಿ ಅತ್ಯಂತ ಜನಪ್ರಿಯರು. ಅವರು ಅಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದರೆ, ಭಾರೀ ಅಂತರದಿಂದ ಗೆಲ್ಲುತ್ತಾರೆ ಎಂದು ಕಾಂಗ್ರೆಸ್ ನಾಯಕನ ವಿರುದ್ಧ ಗುರು ಆಚಾರ್ಯ ಪ್ರಮೋದ್ ಕೃಷ್ಣಮ್ ಶನಿವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ರಾಹುಲ್ ಗಾಂಧಿ ಅವರ ಕೆಲವು ವಿಡಿಯೋಗಳು ಪಾಕಿಸ್ತಾನದಲ್ಲಿ ವೈರಲ್ ಆದ ಬಗ್ಗೆ ಮಾಧ್ಯಮವೊಂದರ ಜೊತೆ ಮಾತನಾಡಿರುವ ಅವರು, ರಾಹುಲ್ ಗಾಂಧಿಗೆ ಭಾರತ ಮತ್ತು ಇಲ್ಲಿನ ಸಂಸ್ಥೆಗಳ ಮೇಲೆ ನಂಬಿಕೆ ಇಲ್ಲ. ಹೀಗಾಗಿ, ಅವರು ಪಾಕಿಸ್ತಾನದಲ್ಲೇ ಚುನಾವಣೆಗೆ ಸ್ಪರ್ಧೆ ಮಾಡಲಿ. ಅಲ್ಲಿ ಅವರು ದೊಡ್ಡ ಅಂತರದ ಜಯ ಗಳಿಸುವುದು ಪಕ್ಕಾ ಎಂದು ಹೇಳಿದ್ದಾರೆ.

ಪಹಲ್ಗಾಮ್​ ಉಗ್ರ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಪಾಕಿಸ್ತಾನಕ್ಕೆ ಸೂಕ್ತ ಉತ್ತರ ಕೊಟ್ಟಿದೆ. ಇದನ್ನು ಭಾರತೀಯ ಸೇನೆಯೇ ಹೇಳಿದೆ. ಆದರೆ, ರಾಹುಲ್ ಗಾಂಧಿ ಪುರಾವೆ ಕೇಳುತ್ತಾರೆ. ಪಾಕಿಸ್ತಾನದ ಯಾವುದೋ ಒಬ್ಬ ನಾಯಕ ಏನಾದರೂ ಹೇಳಿದರೆ, ಅದನ್ನು ತಕ್ಷಣ ನಂಬುತ್ತಾರೆ. ಅದಕ್ಕಾಗಿಯೇ ಪಾಕಿಸ್ತಾನದ ಜನರು ಅವರನ್ನು ತುಂಬಾ ಪ್ರೀತಿಸುತ್ತಾರೆ ಮತ್ತು ಅವರಿಗೂ ಪಾಕಿಸ್ತಾನದ ಬಗ್ಗೆ ಬಹಳ ಪ್ರೀತಿ ಇರಬಹುದು ಎಂದರು.

ಇದೇ ವೇಳೆ ಆಪರೇಷನ್ ಸಿಂದೂರ್ ಕುರಿತು ಕೇಂದ್ರ ಸರ್ಕಾರವನ್ನು ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಪಕ್ಷ ಪ್ರಶ್ನಿಸುತ್ತಿರುವುದರ ಬಗ್ಗೆ ಕೃಷ್ಣಮ್ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ ಭಾರತೀಯ ಸೇನೆ, ಸಂಸತ್ತು ಮತ್ತು ಸಂವಿಧಾನವನ್ನು ಪ್ರಶ್ನಿಸುವುದನ್ನು ತಮ್ಮ ಅಭ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಗುರಿಯಾಗಿಸಿ ಕಾರ್ಯಾಚರಣೆಯ ವೇಳೆ ಎಷ್ಟು ಭಾರತೀಯ ವಿಮಾನಗಳು ಕಳೆದುಹೋಗಿವೆ ಎಂದು ಕೇಳಿದರು. ಇದಕ್ಕೆ ಅಂತ್ಯವೇ ಇಲ್ಲ ಎಂದು ಬೇಸರಿ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿಯೊಂದಿಗೆ ಹೋಲಿಸಿದ ಕಾಂಗ್ರೆಸ್ ನಾಯಕರ ಬಗ್ಗೆ ಪ್ರತಿಕ್ರಿಯಿಸಿದ ಕೃಷ್ಣಮ್, ಇಂದಿರಾ ಗಾಂಧಿ ಪಾಕಿಸ್ತಾನಕ್ಕೆ ಪಾಠ ಕಲಿಸಿದ ಅತ್ಯಂತ ಜನಪ್ರಿಯ ನಾಯಕಿ. ಆದರೆ, ಈ ದೇಶಕ್ಕೆ ನರೇಂದ್ರ ಮೋದಿಯಂತಹ ಪ್ರಧಾನಿ ಎಂದಿಗೂ ಸಿಕ್ಕಿಲ್ಲ. ಇಂದು, ಭಾರತವು ಅವರ ಕಾರಣದಿಂದಾಗಿ ಜಾಗತಿಕ ಗೌರವ ಹೊಂದಿದೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!