ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಭಾರತವನ್ನು ಕೃಷಿ ದೇಶ ಎಂದು ಕರೆಯಲಾಗುತ್ತದೆ. ಇಲ್ಲಿನ ರೈತರು ದೇಶದ ಆರ್ಥಿಕತೆಯ ಬೆನ್ನೆಲುಬು ಎಂದು ಪರಿಗಣಿಸಲಾಗುತ್ತದೆ, ಆದರೆ ಇಂದು ರೈತರು ವಿದೇಶಿ ರಸಗೊಬ್ಬರಗಳ ಅವಲಂಬನೆಯಿಂದ ತೊಂದರೆಯಲ್ಲಿದ್ದಾರೆ ಎಂದು ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ಭಾರತವು ತನ್ನ ‘ವಿಶೇಷ ರಸಗೊಬ್ಬರಗಳ’ ಶೇ.80ರಷ್ಟು ಚೀನಾದಿಂದ ಪಡೆಯುತ್ತದೆ. ಆದರೆ, ಚೀನಾ ಈ ಪೂರೈಕೆಯನ್ನು ನಿಲ್ಲಿಸಿರುವುದರಿಂದ ರೈತರು ಯೂರಿಯಾ ಮತ್ತು ಡಿಎಪಿಯಂತಹ ರಸಗೊಬ್ಬರಗಳ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಿಕ್ಕಟ್ಟು ರೈತರ ಸಮಸ್ಯೆಗಳನ್ನು ಮತ್ತಷ್ಟು ಉಲ್ಬಣಗೊಳಿಸಿದೆ ಎಂದು ಅವರು ಟೀಕಿಸಿದ್ದಾರೆ.
ಸರ್ಕಾರಕ್ಕೆ ಚೀನಾದಿಂದ ಪೂರೈಕೆ ಯಾವುದೇ ಕ್ಷಣದಲ್ಲಿ ನಿಲ್ಲಬಹುದು ಎಂದು ಮೊದಲೇ ತಿಳಿದಿತ್ತು, ಆದರೆ ಯಾವುದೇ ಪರ್ಯಾಯ ವ್ಯವಸ್ಥೆ ಮಾಡಲಿಲ್ಲ , ಯಾವುದೇ ನೀತಿಯನ್ನು ರೂಪಿಸಿಲ್ಲ, ಯಾವುದೇ ಪ್ರಯತ್ನವನ್ನೂ ಮಾಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಪ್ರಧಾನಿ ಮೋದಿ ಅವರು ಗೊಬ್ಬರ ಚೀಲಗಳ ಮೇಲೆ ತಮ್ಮ ಚಿತ್ರಗಳನ್ನು ಮುದ್ರಿಸುವಲ್ಲಿ ತೊಡಗಿದ್ದಾರೆ, ಆದರೆ ರೈತರು ‘ಮೇಡ್ ಇನ್ ಚೀನಾ’ ರಸಗೊಬ್ಬರಗಳ ಮೇಲೆ ಅವಲಂಬಿತರಾಗಿದ್ದಾರೆ. ‘ರೈತರು ತಮ್ಮ ಸ್ವಂತ ಭೂಮಿಯಲ್ಲಿ ಇತರರನ್ನು ಅವಲಂಬಿಸಬೇಕೇ?’ ಎಂದು ಅವರು ಪ್ರಶ್ನಿಸಿದ್ದಾರೆ.