ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದ್ದು, ಈ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಣಿಪುರ ರಾಜ್ಯಪಾಲ ಅನುಸೂಯಾ ಊಕಿ ಅವರನ್ನು ಭೇಟಿ ಮಾಡಿದ್ದಾರೆ.
ಬಳಿಕ ಮಾತನಾಡಿದ ರಾಹುಲ್ ಗಾಂಧಿ , ಯಾವುದೇ ಸಮಸ್ಯೆಗೆ ಹಿಂಸಾಚಾರ ಪರಿಹಾರವಲ್ಲ. ಶಾಂತಿ ಕಾಪಾಡಿ ಎಂದು ಎಲ್ಲ ವರ್ಗದ ಜನತೆಯಲ್ಲಿ ಮನವಿ ಮಾಡಿದ್ದಾರೆ.
‘ಶಾಂತಿಯೇ ನಮ್ಮ ಮುಂದಿನ ದಾರಿ. ಪ್ರತಿಯೊಬ್ಬರೂ ಈಗ ಶಾಂತಿ ಬಗ್ಗೆ ಮಾತ್ರ ಮಾತನಾಡಬೇಕು ಮತ್ತು ಅದರತ್ತ ಮುನ್ನಡೆಯಬೇಕು. ಈ ರಾಜ್ಯಕ್ಕೆ ನಾನು ಬಂದಿದ್ದೇನೆ. ಶಾಂತಿ ಸ್ಥಾಪನೆಗೆ ಬೇಕಾದ ಯಾವುದೇ ರೀತಿಯ ನೆರವನ್ನು ನೀಡಲು ಸಿದ್ಧನಿದ್ದೇನೆ’ಎಂದು ರಾಹುಲ್ ತಿಳಿಸಿದ್ದಾರೆ.
ಮಣಿಪುರದ ಜನರ ನೋವನ್ನು ನಾನು ಹಂಚಿಕೊಂಡಿದ್ದೇನೆ. ಇದು ಭಯಾನಕ ದುರಂತ. ಇದು ಮಣಿಪುರದ ಜನ ಮತ್ತು ದೇಶದ ಜನರಿಗೆ ಅತ್ಯಂತ ನೋವಿನ ಸಂಗತಿಯಾಗಿದೆ’ಎಂದು ಹೇಳಿದ್ದಾರೆ.
ಈ ವೇಳೆ ಇಂಫಾಲ್, ಚುರಾಚಂದ್‌ಪುರ ಮತ್ತು ಮೊಯಿರಾಂಗ್‌ನಲ್ಲಿನ ವಿವಿಧ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿದ ಮತ್ತು ಸಮುದಾಯಗಳ ಜನರೊಂದಿಗೆ ನಡೆಸಿದ ಸಭೆಗಳ ಬಗ್ಗೆ ರಾಹುಲ್ ವಿವರಿಸಿದರು.
ನಾನು ಸರ್ಕಾರಕ್ಕೆ ಹೇಳುವುದೇನೆಂದರೆ, ಶಿಬಿರಗಳಲ್ಲಿ ಮೂಲಭೂತ ಸೌಕರ್ಯ ಮತ್ತು ಆಹಾರ ವ್ಯವಸ್ಥೆಯನ್ನು ಸುಧಾರಿಸಬೇಕಾಗಿದೆ. ಔಷಧಗಳನ್ನು ಪೂರೈಸಬೇಕಿದೆ. ಅಲ್ಲಿನ ಜನರಿಂದ ನನಗೆ ಇಂತಹ ದೂರುಗಳು ಬಂದಿವೆ’ಎಂದು ತಿಳಿಸಿದರು.