ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ತಮ್ಮ ವರ್ತನೆಯ ಕಾರಣದಿಂದಾಗಿ ಸುದ್ದಿಯಲ್ಲಿದ್ದಾರೆ.
ಹಿಂದೊಮ್ಮೆ ಕಣ್ಣು ಹೊಡೆದು ವಿವಾದ ಸೃಷ್ಟಿಸಿದ್ದ ರಾಹುಲ್ ಗಾಂಧಿ, ಈಗ ಸೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಕೆನ್ನೆ ಹಿಂಡಿರುವುದು ವಿವಾದಕ್ಕೆ ಕಾರಣವಾಗಿದೆ.
ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಬುಧವಾರ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನು, ಸದನದ ಘನತೆಯನ್ನು ಎತ್ತಿಹಿಡಿಯುವ ಸಲುವಾಗಿ ಸದಸ್ಯರು ಪಾಲಿಸಬೇಕಾದ ಕಾರ್ಯವಿಧಾನದ ನಿಯಮಗಳನ್ನು ಪಾಲಿಸುವಂತೆ ತಿಳಿಸಿದ್ದಾರೆ. ಇದಾದ ಸ್ವಲ್ಪ ಸಮಯದ ನಂತರ, ಬಿಜೆಪಿ ನಾಯಕ ಅಮಿತ್ ಮಾಳವೀಯ ಅವರು ರಾಹುಲ್ ಗಾಂಧಿಯವರ ಹಳೆಯ ವೀಡಿಯೊವನ್ನು ಹಂಚಿಕೊಂಡರು. ಅದರಲ್ಲಿ ಸದನವು ಆರ್ಡರ್ ಅಲ್ಲಿದ್ದಾಗ ಲೋಕಸಭೆಯಲ್ಲಿ ಅವರು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿಯವರ ಕೆನ್ನೆ ಹಿಂಡುತ್ತಿದ್ದಾರೆ.
‘ಲೋಕಸಭಾ ಸ್ಪೀಕರ್ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಮೂಲಭೂತ ಸಂಸದೀಯ ಶಿಷ್ಟಾಚಾರದ ಬಗ್ಗೆ ನೆನಪಿಸಬೇಕಾಗಿರುವುದು ನಾಚಿಕೆಗೇಡಿನ ಸಂಗತಿ. ಕಾಂಗ್ರೆಸ್ ಈ ಬಾಲಿಶ ವ್ಯಕ್ತಿಯನ್ನು ನಮ್ಮ ಮೇಲೆ ಹೇರಿರುವುದು ನಿಜಕ್ಕೂ ದುರದೃಷ್ಟಕರ ಎಂದು ಹೇಳಿದ್ದಾರೆ.
ಅಮಿತ್ ಮಾಳವೀಯ ಹಂಚಿಕೊಂಡ ಈ ವಿಡಿಯೋ ಮಾರ್ಚ್ 18 ರಂದು ಸದನದ ಕಲಾಪಗಳ ಸಂದರ್ಭದಲ್ಲಿ ಸೆರೆಹಿಡಿಯಲಾಗಿದೆ.
ಬುಧವಾರ ಬೆಳಗ್ಗೆ, ಸ್ಪೀಕರ್ ರಾಹುಲ್ ಗಾಂಧಿಯವರನ್ನು ನಿಯಮಗಳನ್ನು ಪಾಲಿಸುವಂತೆ ಕೇಳಿದ ನಂತರ, ವಿರೋಧ ಪಕ್ಷದ ನಾಯಕ, ಬಿರ್ಲಾ ತಮ್ಮ ಬಗ್ಗೆ ಆಧಾರರಹಿತ ಮಾತನಾಡಿದ್ದಾರೆ ಎಂದು ರಾಹುಲ್ ಗಾಂಧಿ ಸದನದ ಒಳಗೆ ಹೇಳಿದ್ದಾರೆ.