ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರ ಜನ ಗಣತಿಯಲ್ಲಿ ಜಾತಿ ಗಣನೆ ನಿರ್ಧಾರವನ್ನು ಲೋಕಸಭೆಯ ವಿಪಕ್ಷ ನಾಯಕ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸ್ವಾಗತಿಸಿದರು.
ದಿಲ್ಲಿಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಮೂಲತಃ ಕಾಂಗ್ರೆಸ್‌ನ ಯೋಜನೆ. ಇದನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಳವಡಿಸಿಕೊಂಡಿದೆ. ಆದಷ್ಟು ಬೇಗ ಕೇಂದ್ರ ಗಣತಿ ಕೈಗೊಳ್ಳಲಿ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ನೇತೃತ್ವದ ತೆಲಂಗಾಣ ಸರ್ಕಾರ ನಡೆಸಿದ ಜಾತಿ ಗಣತಿ ಮಾದರಿ. ಇದು ರಾಷ್ಟ್ರ ಮಟ್ಟದ ಗಣತಿಗೆ ನೀಲ ನಕ್ಷೆಯಾಗಲಿದೆ. ಇತ್ತ ಬಿಹಾರದಲ್ಲಿಯೂ ಜಾತಿ ಗಣತಿ ನಡೆದಿದೆ. ಆದರೆ ಇವೆರಡೂ ರಾಜ್ಯಗಳ ಗಣತಿಯಲ್ಲಿ ಸಾಕಷ್ಟು ವ್ಯತ್ಯಾಸವಿದೆ ಎಂದು ತಿಳಿಸಿದರು.
ಸಂಸತ್‌ನಲ್ಲಿ ನಾವು ಜಾತಿ ಗಣತಿ ನಡೆಸುವಂತೆ ಪ್ರಸ್ತಾವಿಸಿದ್ದೇವೆ. ಮೀಸಲಾತಿಯ ಶೇ. 50ರಷ್ಟು ಗಡಿಯನ್ನು ತೆಗೆದು ಹಾಕುವಂತೆ ಆಗ್ರಹಿಸಿದ್ದೇವೆ. ಪ್ರಧಾನಿ ಮೋದಿ ಅವರು ದೇಶದಲ್ಲಿ ಕೇವಲ 4 ಜಾತಿ ಇದೆ ಎಂದಿದ್ದರು. ಆದರೆ ಇದು ಹೇಗೆ ಬದಲಾಯ್ತು ಎನ್ನುವುದು ತಿಳಿದಿಲ್ಲ. ಇದೀಗ ಸುಮಾರು 11 ವರ್ಷಗಳ ಬಳಿಕ ಜಾತಿ ಗಣತಿ ಘೋಷಣೆಯಾಗಿದೆ ಎಂದರು.
ಜಾತಿ ಗಣತಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. ತೆಲಂಗಾಣ ಮಾದರಿ ಬಳಸಿ ಜಾತಿ ಗಣತಿಯ ಯೋಜನೆಯನ್ನು ರೂಪಿಸಲು ನೆರವು ನೀಡುತ್ತೇವೆ. ಆದರೆ ಸರ್ಕಾರ ಯಾವಾಗ, ಯಾವ ರೀತಿ ಗಣತಿ ನಡೆಸಲಿದೆ ಎನ್ನುವುದರ ಬಗ್ಗೆ ಬಗ್ಗೆ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.