ರಾಯಚೂರು ವಿವಿ ವಸತಿನಿಲಯದಲ್ಲಿ ನಿಲ್ಲಲಾಗದಷ್ಟು ಕೆಟ್ಟ ವಾಸನೆ, ರೂಮ್‌ಗಳಿಗೆ ಕಿಟಕಿಯೇ ಇಲ್ಲ!

ದಿಗಂತ ವರದಿ ರಾಯಚೂರು :

ರಾಯಚೂರು ವಿವಿ ವಸತಿನಿಲಯದಲ್ಲಿ ಕೆಟ್ಟ ವಾಸನೆ ಇದ್ದು, ರೂಮ್‌ಗಳಿಗೆ ಕಿಟಕಿಯೇ ಇಲ್ಲದಂತಾಗಿದೆ. ವಿದ್ಯಾರ್ಥಿಗಳು ಕಿಟಕಿಗಳಿಗೆ ಕಾರ್ಡ್‌ಬೋರ್ಡ್‌ ಮುಚ್ಚಿ ಕವರ್‌ ಮಾಡಿದ್ದು, ಸೊಳ್ಳೆ ಕಾಟ ಹಾಗೂ ಮಳೆಗೆ ನೀರು ಬಂದರೆ ರೂಮ್‌ ಹಳ್ಳದಂತಾಗುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ವಿಶ್ವ ವಿದ್ಯಾಲಯದ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿಲಯಗಳ ಸಮುಚ್ಛಯದಲ್ಲಿ ನಾಲ್ಕು ಬಾಲಕರ ಹಾಗೂ ಒಂದು ವಿದ್ಯಾರ್ಥಿನಿಯರ ವಿದ್ಯಾರ್ಥಿ ವಸತಿ ನಿಲಯಗಳಿವೆ. ಬಾಲಕರ ವಿದ್ಯಾರ್ಥಿ ನಿಲಯಗಳಲ್ಲಿ ಎರಡು ಬ್ಲಾಕ್‌ಗಳಲ್ಲಿ ನೀರು ಎನ್ನುವುದು ಮರಿಚಿಕೆ ಆಗಿದೆ. ಇನ್ನು ಎರಡು ಕಟ್ಟಡಗಳಲ್ಲಿ ನೀರಿದ್ದರೂ ಸಮರ್ಪಕವಾಗಿಲ್ಲ. ಸ್ವಚ್ಛತೆಗೆ ಮೂಲ ನೀರು, ನೀರಿಲ್ಲ ಎಂದರೆ ಅಲ್ಲಿ ಸ್ವಚ್ಛತೆಯನ್ನು ಕಾಣುವುದು ದೂರದ ಮಾತು.

ಕಟ್ಟಡಗಳು ರಾಯಚೂರು ವಿಶ್ವ ವಿದ್ಯಾಲಯದವುಗಳು, ಆದರೆ ವಸತಿ ನಿಲಯಗಳ ನಿರ್ವಹಣೆ ಸಮಾಜ ಕಲ್ಯಾಣ ಇಲಾಖೆಯದ್ದು. ಕಟ್ಟಡದಲ್ಲಿನ ವಿದ್ಯಾರ್ಥಿಗಳಿಗೆ ನೀರು ಮತ್ತು ಸ್ವಚ್ಛತೆಯ ನಿರ್ವಹಣೆ ವಿವಿಯ ಆಡಳಿತ ಮಂಡಳಿಯದ್ದು. ಆದರೆ ಈ ವಸತಿ ನಿಲಯಗಳನ್ನು ಗಮನಿಸಿದರೆ ಒಂದು ಕೊಳಚೆ ಪ್ರದೇಶಕ್ಕೆ ಬಂದಿದ್ದದೇವೆಯೋ ಏನೋ ಎನ್ನುವ ಭಾವನೆ ಬಾರದಿರದು.

ವಸತಿ ನಿಲಯದ ಒಳಗೆ ಅಡಿ ಇಟ್ಟರೆ ಸಾಕು ಗಬ್ಬೆಂದು ವಾಸನೆ ಮೂಗಿಗೆ ರಾಚುವಂತೆ ಬಂದು ತಗಲುತ್ತದೆ. ಇನ್ನು ವರಾಂಡದ ತುಂಬೆಲ್ಲ ಕಸದ ರಾಸಿಯನ್ನು ಕಾಣಬಹುದು. ಶೌಚಾಲಯ, ಸ್ನಾನ ಗೃಹಗಳನ್ನು ಗಮನಿಸಿದರೆ ನಾವು ವಿದ್ಯಾರ್ಥಿ ನಿಲಯದ ಕಟ್ಟಡಕ್ಕೆ ಬಂದಿದ್ದೇವೆಯೋ ಇಲ್ಲವೆ ಯಾವುದಾರೂ ಕಸಾಯಿ ಖಾನೆಗೆ ಬಂದಿದ್ದೇವೆಯೇ ಎನ್ನುವ ರೀತಿಯಲ್ಲಿ ಆಹಾರ ಪದಾರ್ಥಗಳು ಕೊಳೆತ ದುರ್ನಾತ ಕಂಡುಬರುತ್ತದೆ.
ವಸತಿ ನಿಲಯದಲ್ಲಿ ಉಳಿದ ಆಹಾರ ಪದರ್ಥಗಳನ್ನು ಹಾಕುವುದಕ್ಕೆ ಡಸ್ಟ್ಬಿನ್‌ಗಳು ಇಲ್ಲದ ಕಾರಣಕ್ಕೆ ಉಳಿದ ಆಹಾರವನ್ನು ವಿದ್ಯಾರ್ಥಿಗಳು ಎಲ್ಲೆಂದರಲ್ಲಿ ಹಾಕುತ್ತಿದ್ದಾರೆ. ಹೆಚ್ಚಾಗಿ ಪ್ರತಿ ಸ್ನಾನ ಗೃಹದ ಕಿಟಕಿಗಳ ಮೂಲಕನೇ ಹೊರಗೆ ಹಾಕುವುದರಿಂದ ಅರ್ಧ ಹೊರಗೆ ಚಲ್ಲಿದರೆ ಇನ್ನರ್ಧ ಕಿಟಕಿಯಲ್ಲಿ, ಸ್ನಾನ ಗೃಹದಲ್ಲಿ ಬಿದ್ದಿರುವುದನ್ನು ಕಾಣಬಹುದು.


ಇದರಿಂದ ಎರಡು ವಸತಿ ನಿಲಯದಲ್ಲಿನ ವಿದ್ಯಾರ್ಥಿಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಈ ಸ್ನಾನ ಗೃಹಗಳನ್ನು ಬಳಕೆ ಮಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ವಿದ್ಯಾರ್ಥಿಗಳು ಬೇರೆ ವಸತಿ ನಿಲಯಗಳಿಗೆ ಹೋಗುವ ಸ್ಥಿತಿ ಇದೆ. ಎರಡು ಕಟ್ಟಡಗಳಲ್ಲಿನ ನೀರೇ ಇಲ್ಲದ ಕಾರಣಕ್ಕೆ ಇಲ್ಲಿನ ವಿದ್ಯಾರ್ಥಿಗಳು ಉಳಿದ ಎರಡು ಕಟ್ಟಡಗಳಿಗೆ ಶೌಚ, ಸ್ನಾನಕ್ಕೆ ಹೋಗಬೇಕು ಇದರಿಂದ ನಾಲ್ಕೂ ಕಟ್ಟಡಗಳ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.

ಕೊಠಡಿಗಳ ಕಿಟಕಿಗಳಿಗೆ ಗ್ಲಾಸ್‌ಗಳು ಇಲ್ಲದ ಕಾರಣಕ್ಕೆ ವಿದ್ಯಾರ್ಥಿಗಳೇ ಛದ್ದರ ಮತ್ತು ರಟ್ಟುಗಳನ್ನು ಕಟ್ಟಿಕೊಂಡು ಧೂಳು ಮತ್ತು ಸೊಳ್ಳೆಗಳು ವಳಗೆ ಬಾರದಂತೆ ಮಾಡಿಕೊಂಡಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳಿಗೆ ಕೇವಲ ಛದ್ದರುಗಳನ್ನು ಮಾತ್ರ ನೀಡಲಾಗಿದೆ ಇಲ್ಲಿಯವರೆಗೂ ಬೆಡ್‌ಗಳನ್ನು ನೀಡಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಕಾಟ್‌ಗಳ ಮೇಲೆ ಛದ್ದರ ಹಾಕಿಕೊಂಡು ಇಲ್ಲವೆ ಕೇವಲ ಕಾಟ್ ಮೇಲೆ ಮಲಗುತ್ತಾರೆ. ಸರ್ಕಾರ ಕೊಟ್ಟರೂ ಇಲ್ಲಿನ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ನೀಡದಿರುವುದ ಸ್ಪಷ್ಟವಾಗಿ ಕಂಡುಬರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!