April 22, 2026
Wednesday, April 22, 2026
spot_img

ಭೂಮಾಪನ ಮೇಲ್ವಿಚಾರಕನ ಮನೆ ಮೇಲೆ ದಾಳಿ : ರೂ.1.8 ಕೋಟಿ ಅಕ್ರಮ ಆಸ್ತಿ ಪತ್ತೆ

ಹೊಸದಿಗಂತ ವರದಿ ಧಾರವಾಡ:

ಜಿಲ್ಲೆಯ ಭೂಮಾಪನ ಕಚೇರಿ ಮೇಲ್ವಿಚಾರಕ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್.ಸಿದ್ದನಗೌಡರ ನಿವಾಸ ಹಾಗೂ ಕಚೇರಿ ಮೇಲೂ ಲೋಕಾಯುಕ್ತರು ಗುರುವಾರ ದಾಳಿ ನಡೆಸಿ, ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಆರೋಪದ ದೂರಿನ ಹಿನ್ನೆಲೆ ಧಾರವಾಡ ಭಾರತಿ ನಗರದ ಮನೆ, ಐಸ್‌ಗೇಟ್ ಹತ್ತಿರದ ಭೂಮಾಪನ ಕಚೇರಿಯ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ ಲೋಕಾಯುಕ್ತರು, ಬೆಳಗಾವಿ ಜಿಲ್ಲೆಯ ಮುರುಗೋಡದ ನಿವಾಸದ ಮೇಲೂ ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಎಸ್ಪಿ ಸಿದ್ಧಲಿಂಗಪ್ಪ ನೇತೃತ್ವದಲ್ಲಿ ಮೂರು ತಂಡಗಳು ಮೂರು ಕಡೆಗೆ ಏಕಕಾಲಕ್ಕೆ ದಾಳಿ ನಡೆಸಿ, ಬೆಳಿಗ್ಗೆಯಿಂದ ಸಂಜೆವರೆಗೂ ಅಗತ್ಯ ದಾಖಲೆ ಪರಿಶೀಲನೆ ಜೊತೆಗೆ ಅವರ ಆಸ್ತಿಗಳ ದಾಖಲೆಗಳನ್ನೂ ಕೂಡ ವಶಕ್ಕೆ ಪಡೆದು ಪರಿಶೀಲಿಸಿದ್ದಾರೆ ಎನ್ನಲಾಗಿದೆ.

ದಾಳಿ ವೇಳೆ ಒಂದು ಮನೆ, ಮೂರು ನಿವೇಶನಗಳು, 3 ಎಕರೆ ಜಮೀನು, 82 ಸಾವಿರ ನಗದು, ರೂ.35 ಲಕ್ಷ ಮೌಲ್ಯದ 443 ಗ್ರಾಂ ಚಿನ್ನ, 4.5 ಕೆಜಿ ಬೆಳ್ಳಿ ಜೊತೆ ರೂ.15 ಲಕ್ಷ ಮೌಲ್ಯದ ಕಾರು ಸೇರಿದಂತೆ ಒಟ್ಟು ರೂ.2.64 ಕೋಟಿ ಆಸ್ತಿ ಪತ್ತೆ ಹಚ್ಚಿದ್ದಾರೆ.
ಒಟ್ಟು ಆಸ್ತಿಯ ಪೈಕಿ ರೂ.1.80 ಕೋಟಿ ಅಕ್ರಮ ಆಸ್ತಿ ಎಂದು ಗುರುತಿಸಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಆದರೆ, ಈ ದಾಳಿ ಹಿಂದೆ ನೌಕರರ ಸಂಘದ ಸದಸ್ಯರೊಬ್ಬರ ಕೈವಾಡವೂ ಇದೆ ಎಂಬ ಶಂಕೆ ವ್ಯಕ್ತವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !