ಒಡಿಶಾ ರೈಲು ದುರಂತ ಸ್ಥಳದ ನೆರೆಯ ಗ್ರಾಮಗಳ ಅಭಿವೃದ್ಧಿಗೆ 2 ಕೋಟಿ ಘೋಷಿಸಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ಬಜಾರ್ ಎಂಬ ಸಣ್ಣ ರೈಲು ನಿಲ್ದಾಣಕ್ಕೆ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಮಂಗಳವಾರ ಭೇಟಿ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಬಹನಾಗಾ ಬಜಾರ್‌ನಲ್ಲಿ ರೈಲು ಅಪಘಾತ ಘಟನೆಯ ಸಂದರ್ಭದಲ್ಲಿ ಬಹನಾಗಾ ಜನರು ಮುಂದೆ ಬಂದು ಸಹಾಯ ಮಾಡಿದ ರೀತಿ, ಅವರು ರೈಲ್ವೆ ಮತ್ತು ಆಡಳಿತದೊಂದಿಗೆ ಕೆಲಸ ಮಾಡಿದ ರೀತಿ ಗಮನಾರ್ಹವಾಗಿದೆ. ಹೀಗಾಗಿ ಬಹನಗಾ ಗ್ರಾಮದ ಜನತೆಗೆ ಕೃತಜ್ಞತೆ ಸಲ್ಲಿಸಲು ಬಂದಿದ್ದೇನೆ. ನಾನು ಇಲ್ಲಿ ಬಹನಾಗಾ ಬಜಾರ್‌ಗೆ ಬಂದಿದ್ದೇನೆ ಮತ್ತು ಇಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದು ಎಂಬ ಬಗ್ಗೆ ಸ್ಥಳೀಯರೊಂದಿಗೆ ಸಂವಾದ ನಡೆಸಿದ್ದೇನೆ ಎಂದಿದ್ದಾರೆ.

ಬಹನಗಾ ಆಸ್ಪತ್ರೆಯ ಅಭಿವೃದ್ಧಿ ಕಾಮಗಾರಿಗೆ 1 ಕೋಟಿ ರೂಪಾಯಿ ಹಾಗೂ ಗ್ರಾಮ ಹಾಗೂ ಸಮೀಪದ ಗ್ರಾಮಗಳ ಅಭಿವೃದ್ಧಿಗೆ 1 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ. ಒಟ್ಟು ಮೊತ್ತದ ಅರ್ಧದಷ್ಟು ಹಣವನ್ನು ಸಂಸದ್ ನಿಧಿಯಿಂದ ಮತ್ತು ಉಳಿದ ಅರ್ಧವನ್ನು ಭಾರತೀಯ ರೈಲ್ವೇಯಿಂದ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದೇ ವೇಳೆ ದುರಂತವಾದ ನಿಲ್ದಾಣದ ಹಾನಿ ಮತ್ತು ಪುನಃಸ್ಥಾಪನೆ ಕಾರ್ಯದ ಬಗ್ಗೆ ಮಾತನಾಡಿದ ವೈಷ್ಣವ್,ಬಹುತೇಕ ಕೆಲಸ ಮುಗಿದಿದೆ, ಸಿಗ್ನಲಿಂಗ್ ಕೆಲಸ ಮಾತ್ರ ಉಳಿದಿದೆ. ಮುಂದಿನ ನಾಲ್ಕು ದಿನಗಳಲ್ಲಿ ಇದನ್ನು ಮಾಡಬೇಕು. ನಾನು ಬಹನಾಗಾ ಬಜಾರ್‌ನಲ್ಲಿ ನಡೆಯುತ್ತಿರುವ ಎಲ್ಲಾ ಪುನಃಸ್ಥಾಪನೆ ಕಾರ್ಯಗಳನ್ನು ಪರಿಶೀಲಿಸಿದೆ ಮತ್ತು ಇಲ್ಲಿನ ಸ್ಥಳೀಯರೊಂದಿಗೆ ಸಂವಾದ ನಡೆಸಿದೆ. ಸ್ಥಳೀಯರು ಏನೇ ಮನವಿ ಮಾಡಿದರೂ ಅದನ್ನು ಶೀಘ್ರವೇ ಮಾಡಲಾಗುವುದು. ಘಟನೆಯ ಕುರಿತು ತನಿಖೆ ನಡೆಯುತ್ತಿದೆ. ಸ್ವತಂತ್ರ ತನಿಖೆ ನಡೆಯುತ್ತಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!