ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಮತ್ತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಜೊತೆ ಮಾತುಕತೆ ನಡೆಸಿದರು.
ಈ ಸಂದರ್ಭ ಬೆಂಗಳೂರು ನಗರದಿಂದ ಮೈಸೂರು ನಡುವಿನ ರೈಲು ಸೇವೆಗಳ ಕುರಿತು ಸಾರ್ವಜನಿಕರ ಬೇಡಿಕೆಗಳ ಬಗ್ಗೆ ಮನವಿಗಳನ್ನು ಸಲ್ಲಿಸಿದರು.
ಅದರಲ್ಲೂ ಮುಖ್ಯವಾಗಿ ಬೆಂಗಳೂರು-ಮಂಗಳೂರು-ಮುರುಡೇಶ್ವರ ನಡುವೆ ಸಂಚರಿಸುವ ರೈಲು (ರೈಲು ಸಂಖ್ಯೆ 16585) ಮಂಡ್ಯ ಜಿಲ್ಲೆಯ ಮದ್ದೂರು ಮತ್ತು ಮಂಡ್ಯದಲ್ಲಿ ನಿಲುಗಡೆ ನೀಡುವ ಬಗ್ಗೆ ಚರ್ಚಿಸಿದರು. ಈ ಮನವಿಗೆ ಸ್ಪಂದಿಸಿದ ರೈಲ್ವೆ ಸಚಿವರು ತ್ವರಿತವಾಗಿ ಈ ಬಗ್ಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಇದರ ಜೊತೆಗೆ ಮದ್ದೂರು ರೈಲು ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವ ಕುರಿತು, ಮಂಡ್ಯ-ಮೇಲುಕೋಟೆ ರಸ್ತೆಯ ವಿ.ಸಿ. ಫಾರ್ಮ್ ಗೇಟ್‌ನಲ್ಲಿ ರೈಲ್ವೆ ಓವರ್‌ಬ್ರಿಡ್ಜ್ ನಿರ್ಮಾಣಕ್ಕೆ, ಪಾಂಡವಪುರದಲ್ಲಿ ಗೂಡ್ಸ್ ಯಾರ್ಡ್ ಸ್ಥಾಪನೆ, ಮದ್ದೂರು ತಾಲೂಕಿನ ಹನಕೆರೆ ಗ್ರಾಮದ ಬಳಿ ಇರುವ ಲೆವೆಲ್ ಕ್ರಾಸಿಂಗ್ (ಸಂಖ್ಯೆ 60) ಅನ್ನು ಮೇಲ್ದರ್ಜೆಗೆ ಏರಿಸುವಂತೆ,
ಬೆಂಗಳೂರು ಮತ್ತು ಮೈಸೂರು ನಡುವೆ ಸಂಚರಿಸುವ ಚಾಮುಂಡಿ ಎಕ್ಸ್‌ಪ್ರೆಸ್ ರೈಲಿನ (ಸಂಖ್ಯೆ 16215) ಬೋಗಿಗಳನ್ನು ಹೆಚ್ಚಿಸಿ ಪ್ರಯಾಣಿಕರ ಸಾಮರ್ಥ್ಯ ಹೆಚ್ಚಿಸುವ ಬಗ್ಗೆ ಕೂಡ ಸಚಿವರು ರೈಲ್ವೆ ಸಚಿವರ ಜೊತೆ ಚರ್ಚಿಸಿದರು.
ಮಂಗಳೂರು ಮತ್ತು ಹಾಸನ ಮಾರ್ಗವಾಗಿ ಮುಂಬೈ-ಬೆಂಗಳೂರು-ಮುಂಬೈ ನಗರಗಳಿಗೆ ಸಂಪರ್ಕಿಸಲು ಹೊಸ ರೈಲು, ಹೆಜ್ಜಾಲ-ಚಾಮರಾಜನಗರ ರೈಲು ಮಾರ್ಗ ಮಂಜೂರಾತಿಗೆ ಸಚಿವ ಕುಮಾರಸ್ವಾಮಿ ಅವರು ಮನವಿ ಮಾಡಿದರು.



