Saturday, December 20, 2025

Railways Update | ಡಿಜಿಟಲ್ ವಂಚನೆಗೆ ಬ್ರೇಕ್: ರೈಲ್ವೆ ಪ್ರಯಾಣಕ್ಕೆ ಟಿಕೆಟ್‌ ಮುದ್ರಿತ ಪ್ರತಿ ಕಡ್ಡಾಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಂತ್ರಜ್ಞಾನ ಬೆಳವಣಿಗೆಯ ಜೊತೆಗೆ ಹೆಚ್ಚುತ್ತಿರುವ ಡಿಜಿಟಲ್ ವಂಚನೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಭಾರತೀಯ ರೈಲ್ವೆ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ಮುಂದೆ ಕಾಯ್ದಿರಿಸದ ರೈಲು ಪ್ರಯಾಣಕ್ಕೆ ಕೇವಲ ಮೊಬೈಲ್ ನಲ್ಲಿ ಟಿಕೆಟ್ ತೋರಿಸಿದರೆ ಸಾಕಾಗೋದಿಲ್ಲ. ಕಡ್ಡಾಯವಾಗಿ ಮುದ್ರಿತ ಟಿಕೆಟ್ ಪ್ರಯಾಣಿಕರ ಕೈಯಲ್ಲಿರಬೇಕು ಎಂದು ರೈಲ್ವೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ ಬಳಸಿ ತಯಾರಿಸಲಾದ ನಕಲಿ ಟಿಕೆಟ್ ಪ್ರಕರಣಗಳು ರೈಲ್ವೆಯ ಗಮನ ಸೆಳೆದಿವೆ. ಜೈಪುರದಲ್ಲಿ ನಡೆದ ತನಿಖೆಯ ವೇಳೆ, ಕೆಲವರು ಒಂದೇ ಟಿಕೆಟ್‌ನಲ್ಲಿ ಅನೇಕ ಪ್ರಯಾಣಿಕರ ವಿವರಗಳನ್ನು ತೋರಿಸುವಂತೆ ಎಐ ಉಪಕರಣಗಳ ಮೂಲಕ ತಿದ್ದುಪಡಿ ಮಾಡಿರುವುದು ಬೆಳಕಿಗೆ ಬಂದಿದೆ. ಮೊಬೈಲ್‌ನಲ್ಲಿ ತೋರಿಸಿದ ಟಿಕೆಟ್ ಮೇಲ್ನೋಟಕ್ಕೆ ನಿಜವಾಗಿಯೇ ಕಾಣಿಸಿಕೊಂಡರೂ, ಸೂಕ್ಷ್ಮ ಪರಿಶೀಲನೆಯಲ್ಲಿ ವಂಚನೆ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ರೈಲ್ವೆ ಭದ್ರತಾ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಲು ಮುಂದಾಗಿದೆ.

ಈ ಹೊಸ ನಿಯಮದಂತೆ, ಯುಟಿಎಸ್, ಎಟಿವಿಎಂ ಅಥವಾ ಕೌಂಟರ್ ಮೂಲಕ ಖರೀದಿಸಿದ ಕಾಯ್ದಿರಿಸದ ಟಿಕೆಟ್‌ಗಳ ಮುದ್ರಿತ ಪ್ರತಿಯನ್ನು ಕೊಂಡೊಯ್ಯುವುದು ಕಡ್ಡಾಯವಾಗಿದೆ. ಟಿಸಿ ಪರಿಶೀಲನೆಯ ವೇಳೆ ಕ್ಯೂಆರ್ ಕೋಡ್, ಯುಟಿಎಸ್ ಸಂಖ್ಯೆ ಹಾಗೂ ಕೋಡ್‌ಗಳನ್ನು ಸ್ಕ್ಯಾನ್ ಮಾಡಿ ಟಿಕೆಟ್ ನಿಜವಾದುದೇ ಎಂಬುದನ್ನು ತಕ್ಷಣವೇ ದೃಢಪಡಿಸಲಾಗುತ್ತದೆ. ಆದರೆ, ಇ-ಟಿಕೆಟ್ ಹಾಗೂ ಎಂ-ಟಿಕೆಟ್‌ಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ ಎಂದು ರೈಲ್ವೆ ಸ್ಪಷ್ಟನೆ ನೀಡಿದೆ.

error: Content is protected !!