May 22, 2026
Friday, May 22, 2026
spot_img

ಸಿಲಿಕಾನ್ ಸಿಟಿಯಲ್ಲಿ ಮುಂದುವರಿದ ಮಳೆ ಭೀತಿ: ಮೆಟ್ರೋ ಹಳಿ ಮೇಲೆ ಬಿದ್ದ ಶೀಟ್‌ಗಳು, ಪ್ರಯಾಣಿಕರ ಪರದಾಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಭಾರತೀಯ ಹವಾಮಾನ ಇಲಾಖೆ (IMD) ಇಂದು ನಗರಕ್ಕೆ ‘ಯೆಲ್ಲೋ ಅಲರ್ಟ್’ ಘೋಷಿಸಿದೆ. ಗುರುವಾರ ಸಂಜೆ ಸುರಿದ ಭಾರಿ ಗಾಳಿ-ಮಳೆ ಹಾಗೂ ಆಲಿಕಲ್ಲು ಮಳೆಗೆ ಇಡೀ ರಾಜಧಾನಿ ನದಿಯಂತಾಗಿದ್ದು, ಜನಜೀವನ ಸಂಪೂರ್ಣ ಸ್ತಬ್ಧಗೊಂಡಿದೆ. ಮುಂದಿನ ಮೂರು ದಿನಗಳ ಕಾಲ ಇದೇ ರೀತಿಯ ಅಸ್ಥಿರ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕೆಲವೇ ನಿಮಿಷಗಳಲ್ಲಿ ಸುರಿದ ಧಾರಾಕಾರ ಮಳೆ

ಗುರುವಾರ ರಾತ್ರಿ 8:30ರ ವೇಳೆಗೆ ಬೆಂಗಳೂರು ನಗರ ಕೇಂದ್ರ ಭಾಗದಲ್ಲಿ ಭಾರಿ ಪ್ರಮಾಣದ 44.2 ಮಿಮೀ ಮಳೆ ದಾಖಲಾಗಿದೆ. ಅದೇ ಸಮಯದಲ್ಲಿ ಎಚ್‌ಎಎಲ್ (HAL) ಪ್ರದೇಶದಲ್ಲಿ ಕೇವಲ 3.8 ಮಿಮೀ ಮಳೆಯಾಗಿದೆ. ಕೆಲವೇ ಕೇವಲ ನಿಮಿಷಗಳಲ್ಲಿ ಸುರಿದ ಈ ಭಾರಿ ಮಳೆಗೆ ನಗರದ ತಗ್ಗು ಪ್ರದೇಶಗಳು ಜಲಾವೃತಗೊಂಡವು. ಬ್ರಿಗೇಡ್ ರಸ್ತೆ, ಸಂಕಿ ರಸ್ತೆ, ಲಾಲ್‌ಬಾಗ್ ರಸ್ತೆ, ಸುಲ್ತಾನ್‌ಪೇಟೆ, ವರ್ತೂರು ಕೋಡಿ ಮತ್ತು ಗರುಡಾಚಾರ್ ಪಾಳ್ಯ ಸೇರಿದಂತೆ ಹಲವು ಭಾಗಗಳಲ್ಲಿ ತೀವ್ರ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಕೆ.ಆರ್. ಸರ್ಕಲ್ ಅಂಡರ್‌ಪಾಸ್ ಅನ್ನು ವಾಹನ ಸಂಚಾರಕ್ಕೆ ಮುಚ್ಚಲಾಗಿತ್ತು.

ಮೆಟ್ರೋ ಹಳಿಗಳ ಮೇಲೆ ಬಿದ್ದ ಶೀಟ್‌ಗಳು

ಭಾರಿ ಬಿರುಗಾಳಿಗೆ ಹೂಡಿ ಮತ್ತು ಬೆನ್ನಿಗಾನಹಳ್ಳಿ ಬಳಿ ಮೆಟ್ರೋ ಹಳಿಗಳ ಮೇಲೆ ಲೋಹದ ಶೀಟ್‌ಗಳು ಬಿದ್ದ ಕಾರಣ ಪರ್ಪಲ್ ಮತ್ತು ಗ್ರೀನ್ ಲೈನ್ ಮೆಟ್ರೋ ಸಂಚಾರದಲ್ಲಿ ಭಾರಿ ವಿಳಂಬ ಉಂಟಾಯಿತು. ಇದರಿಂದಾಗಿ ಮೆಜೆಸ್ಟಿಕ್ ಮತ್ತು ಆರ್.ವಿ. ರಸ್ತೆ ಇಂಟರ್‌ಚೇಂಜ್ ನಿಲ್ದಾಣಗಳಲ್ಲಿ ಸಾವಿರಾರು ಪ್ರಯಾಣಿಕರು ಸಿಲುಕಿಕೊಂಡರು.

ಮೆಟ್ರೋ ರೈಲುಗಳಲ್ಲಿ ಜನದಟ್ಟಣೆ ಮಿತಿ ಮೀರಿತ್ತು. ಬಾಗಿಲು ಮುಚ್ಚಲು ಭದ್ರತಾ ಸಿಬ್ಬಂದಿಯೇ ಜನರನ್ನು ಒಳಗಡೆ ತಳ್ಳಬೇಕಾದ ಪರಿಸ್ಥಿತಿ ಉಂಟಾಗಿತ್ತು. ಪ್ರತಿ ನಿಲ್ದಾಣದಲ್ಲೂ ರೈಲುಗಳು 3 ರಿಂದ 4 ನಿಮಿಷಗಳ ಕಾಲ ನಿಲ್ಲುತ್ತಿದ್ದವು ಎಂದು ಮೆಟ್ರೋ ಪ್ರಯಾಣಿಕರೊಬ್ಬರು ತಮಗಾದ ತೊಂದರೆಯನ್ನು ಹಂಚಿಕೊಂಡಿದ್ದಾರೆ. ಇನ್ನು ಓಲ್ಡ್ ಏರ್‌ಪೋರ್ಟ್ ರಸ್ತೆ, ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದ ಬಳಿ ಮರಗಳು ಬಿದ್ದಿದ್ದರಿಂದ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಮೇ 26 ಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶ

ಐಎಂಡಿ ಬೆಂಗಳೂರು ಕೇಂದ್ರದ ಮುಖ್ಯಸ್ಥ ಎನ್. ಪುವಿಯರಸನ್ ಪ್ರಕಾರ, ಮುಂದಿನ 3 ದಿನಗಳ ಕಾಲ ಗಂಟೆಗೆ 40 ಕಿಮೀ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಮೇ 24 ರವರೆಗೆ ಯೆಲ್ಲೋ ಅಲರ್ಟ್ ಜಾರಿಯಲ್ಲಿರಲಿದೆ.

ಇದೇ ವೇಳೆ ಐಎಂಡಿ ಹಿರಿಯ ವಿಜ್ಞಾನಿ ಸಿ.ಎಸ್. ಪಾಟೀಲ್ ಮಾಹಿತಿ ನೀಡಿ, ನೈಋತ್ಯ ಮುಂಗಾರು ಮೇ 26 ರ ಸುಮಾರಿಗೆ ಕೇರಳಕ್ಕೆ ಪ್ರವೇಶಿಸಲಿದೆ. ಜೂನ್ ಮೊದಲ ವಾರದಲ್ಲಿ ಇದು ಕರ್ನಾಟಕಕ್ಕೆ ಲಗ್ಗೆ ಇಡಲಿದೆ. ಜೂನ್‌ನಲ್ಲಿ ವಾಡಿಕೆಯಂತೆ ಮಳೆಯಾಗಲಿದ್ದರೂ, ಜುಲೈನಿಂದ ಪೆಸಿಫಿಕ್ ಮಹಾಸಾಗರದಲ್ಲಿ ‘ಎಲ್ ನಿನೋ’ (El Niño) ಪರಿಸ್ಥಿತಿ ಸೃಷ್ಟಿಯಾಗುವ ಸಾಧ್ಯತೆ ಇದೆ. ಇದರಿಂದಾಗಿ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ವಲಯಗಳು ಸೃಷ್ಟಿಯಾಗುವುದು ಕಡಿಮೆಯಾಗಲಿದ್ದು, ಮುಂಗಾರಿನ ಉತ್ತರಾರ್ಧದಲ್ಲಿ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಬಹುದು ಎಂದು ಎಚ್ಚರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !