ಹೊಸದಿಗಂತ ವರದಿ,ಚಿಕ್ಕಬಳ್ಳಾಪುರ:
ಫೆಂಗಲ್ ಚಂಡಮಾರುತದ ಪರಿಣಾಮ ಎರಡು ದಿನಗಳಿಂದ ಸುರಿಯುತ್ತಿರುವ ರಣಮಳೆ ಮತ್ತು ಕೊರಿಯುವ ಚಳಿಗೆ ಜಿಲ್ಲೆಯಾದ್ಯಂತ ಜನಜೀವನ ತತ್ತರಿಸಿದ್ದು, ಮಂಗಳವಾರವೂ ಶಾಲೆ, ಕಾಲೇಜುಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ.
ಫೆಂಗಲ್ ಸೈಕ್ಲೋನ್ ಎಫೆಕ್ಟ್ ಕಾರಣ ಜಿಲ್ಲಾದ್ಯಂತ ಮಳೆಯ ಹಬ್ಬರ ಹಾಗೂ ವಿಪರೀತ ಚಳಿ ಇರುವ ಹಿನ್ನೆಲೆಯಲ್ಲಿ (ಡಿ.3) ಮಂಗಳವಾರವೂ ಚಿಕ್ಕಬಳ್ಳಾಪುರ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ರಜೆ ಘೋಷಣೆ ಮಾಡಲಾಗಿದೆ.
ಜಿಲ್ಲಾಧಿಕಾರಿ ಮನೆ ಬಳಿಯೇ ಧರೆಗುರುಳಿದ ಮರ
ನಗರದಿಂದ ಮೂಷ್ಟೂರು ಮಾರ್ಗದ ರಸ್ತೆಯಲ್ಲಿರುವ ಡಿಸಿ ರವೀಂದ್ರ ನಿವಾಸದ ರಸ್ತೆಯಲ್ಲೇ ಬೃಹತ್ ಮರವೊಂದು ಸೋಮವಾರ ಧರೆಗುರುಳಿದೆ. ಸದಾ ಸಂಚಾರದಟ್ಟಣೆಯಿಂದ ಕೂಡಿರುತ್ತಿದ್ದ ರಸ್ತೆ ಮಳೆಯ ಕಾರಣ ಇಂದು ಖಾಲಿಯಾಗಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಎನ್ನುತ್ತಾರೆ ಸ್ಥಳೀಯರು. ಅಲ್ಲದೇ ಇದೇ ರಸ್ತೆಯಲ್ಲಿ ಇನ್ನಷ್ಟು ಮರಗಳು ಬೀಳುವ ಹಂತದಲ್ಲಿದ್ದು, ಅವುಗಳನ್ನು ತೆರವುಗೊಳಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.
ತರಕಾರಿ, ಹೂವು ಬೆಳೆಗಳ ಹಾನಿ
ಚಿಕ್ಕಬಳ್ಳಾಪುರ ಜಿಲ್ಲೆಗೂ ತಟ್ಟಿದೆ. ಸೈಕ್ಲೋನ್ ಪರಿಣಾಮದಿಂದ ಜಿಲ್ಲೆಯಾದ್ಯಂತ ಹೂವು ಹಾಗೂ ತರಕಾರಿ, ರಾಗಿ ಬೆಳೆಗಳು ಹಾನಿಯಾಗಿವೆ.
ಜಿಲ್ಲೆಯಲ್ಲಿ ತರಹೇವಾರಿ ಸೇವಂತಿಗೆ, ಗುಲಾಬಿ, ಚೆಂಡು ಹೂ, ಕನಕಾಂಬರ, ಸೇರಿದಂತೆ ವಿವಿಧ ರೀತಿಯ ಹೂವುಗಳನ್ನ ಬೆಳೆಯಲಾಗುತ್ತದೆ. ಆದರೆ ಕಳೆದ 2 ದಿನಗಳಿಂದ ಮಳೆ ಸುರಿಯುತ್ತಿದ್ದು, ಹೋದೋಟಗಳೆಲ್ಲವೂ ಮಳೆ ನೀರಿನಿಂದ ಆವೃತವಾಗಿ ಹೂವನ್ನು ಬಿಡಿಸಲಾಗದೆ ಗಿಡಗಳಲ್ಲೇ ಕೊಳೆಯುತ್ತಿವೆ. ಇದರಿಂದ ರೈತರು ಕಂಗಾಲಾಗಿದ್ದಾರೆ.
ತೇವಾಂಶದಿಂದ ಹೂವನ್ನ ಪಾರ್ಸೆಲ್ ಕೊಂಡೊಯ್ಯಲಾಗುವುದಿಲ್ಲ ಎಂದು ಜನ ಖರೀದಿಗೂ ಮುಂದಾಗುತ್ತಿಲ್ಲ.ಇದರಿಂದ ಹೂ ಬೆಳೆದ ರೈತರು ನಷ್ಟಕ್ಕೀಡಾಗಿದ್ದಾರೆ. ಅಲ್ಲದೆ ಕಟಾವಿಗೆ ಬಂದಿದ್ದ ರಾಗಿ ಬೆಳೆ ಸಹ ಮಳೆಯಿಂದ ಒದ್ದೆಯಾಗಿ ನಾಶವಾಗುತ್ತಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಕೊರಿಯುವ ಚಳಿ: ಜಿಲ್ಲೆಯಾದ್ಯಂತ ಬೀಳುತ್ತಿರುವ ಮಳೆಗೆ ಮೋಡಗಳಿಂದ ಸೂರ್ಯನು ಕಾಣೆಯಾಗಿದ್ದು, ಸಹಜವಾಗಿಯೇ ಕೊರಿಯುವ ಚಳಿಗೆ ಜನರು ನಡುಗುವಂತಾಗಿದೆ. ಅದರಲ್ಲೂ ಮಕ್ಕಳು ಮತ್ತು ವಯಸ್ಸಾದ ಹಿರಿಯರು ಚಳಿಯ ಕಾಟಕ್ಕೆ ಮನೆಯಿಂದ ಹೊರಬರದಂಗಾಗಿದ್ದು, ಬೆಚ್ಚನೆಯ ವಸ್ತ್ರಗಳಿಗೆ, ಬಿಸಿ ತಿನಿಸುಗಳಿಗೆ ಮಾರುಹೋಗಿದ್ದಾರೆ.
ಸ್ವೀಟ್ ಕಾರ್ನ್ ಬೆಳೆ ಬುಡಮೇಲು
ಚಿಂತಾಮಣಿ ತಾಲ್ಲೂಕಿನ ಕೈವಾರ ಹೋಬಳಿಯ, ಸುಬ್ಬರಾಯನಪೇಟೆ ಗ್ರಾಮದ ರೈತರಾದ ಬಿ.ಎನ್.ಲಿಂಗಪ್ಪ ಮತ್ತು ದೇವರಾಜು ಅವರು ಸುಮಾರು ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಸ್ವೀಟ್ ಕಾರ್ನ್ (ಜೋಳ) ಪಸಲಿನ ಹಂತದಲ್ಲಿ ಸೋಮವಾರ ಸುರಿದ ಮಳೆ ಮತ್ತು ಗಾಳಿಗೆ ಬುಡಮೇಲಾಗಿದ್ದು ರೈತರಿಗೆ ಲಕ್ಷಾಂತರ ರೂಪಾಯಿಗಳ ನಷ್ಟವಾಗಿದೆ.