ಮಳೆ ಹಾನಿ: ತಕ್ಷಣ ಪರಿಹಾರ ವಿತರಿಸಲು ಮುಖ್ಯಮಂತ್ರಿ ಸೂಚನೆ

ಹೊಸದಿಗಂತ ವರದಿ ಮಡಿಕೇರಿ:

ಮಳೆಯಿಂದ ಹಾನಿಯಾದ ಮನೆ ಹಾಗೂ ಇತರೆ ಹಾನಿಗೆ ತಕ್ಷಣವೇ ಪರಿಹಾರ ವಿತರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು. ಮಳೆ ಹಾನಿ ಸಂಬಂಧ ವಿಡಿಯೋ ಸಂವಾದ ಮೂಲಕ ಜಿಲ್ಲಾಧಿಕಾರಿ ಅವರಿಂದ ಮಾಹಿತಿ ಪಡೆದು ಮಾತನಾಡಿದ ಅವರು, ಕಾಳಜಿ ಕೇಂದ್ರದಲ್ಲಿ ಮೆನು ಪ್ರಕಾರ ಅಹಾರ‌ ಪೂರೈಸಬೇಕು. ಸಂತ್ರಸ್ತರು ಕಾಳಜಿ ಕೇಂದ್ರಕ್ಕೆ ಬರದೆ ಸಂಬಂಧಿಕರ ಮನೆಗೆ ಹೋದಲ್ಲಿ ಅವರಿಗೂ ಆಹಾರ ಕಿಟ್ ನೀಡಬೇಕೆಂದು ಮುಖ್ಯಮಂತ್ರಿ ನಿರ್ದೇಶನ ನೀಡಿದರು.

ಮಳೆಯಿಂದ ಹಾನಿಯಾದ ರಸ್ತೆ, ಸೇತುವೆ ದುರಸ್ತಿಗೆ ಮುಂದಾಗಬೇಕು. ಸಾರಿಗೆ ಮತ್ತು ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗದಂತೆ ಗಮನಹರಿಸಬೇಕು. ಭೂಕುಸಿತ ಹೆಚ್ಚಿರುವ ಪ್ರದೇಶದಲ್ಲಿ ಜನರ ಮನವೊಲಿಸಿ ಸ್ಥಳಾಂತರಿಸಿ. ಹೆಚ್ಚಿನ ಮಳೆಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಲ್ಲಿ ಕೂಡಲೆ‌ ವಿದ್ಯುತ್ ಲೈನ್, ಟ್ರಾನ್ಸ್’ಫಾರ್ಮರ್ ಪುನಃ ಸ್ಥಾಪಿಸಬೇಕು. ಪರಿಹಾರ ಕಲ್ಪಿಸಲು ಹಣದ ಕೊರತೆ ಇಲ್ಲ, ಮಳೆ ಹಾನಿ ಸಂಬಂಧ ಅಯಾಯ ಸಂದರ್ಭದಲ್ಲಿ ಪರಿಹಾರ ವಿತರಿಸಬೇಕೆಂದು ನಿರ್ದೇಶಿಸಿದ್ರು.

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾಹಿತಿ ನೀಡಿ, ಮನೆ ಹಾನಿಗೆ ತಕ್ಷಣವೇ ಪರಿಹಾರ ವಿತರಿಸಲಾಗುತ್ತಿದೆ. ಭಾಗಮಂಡಲ -ಕರಿಕೆ ರಸ್ತೆ ಮಾರ್ಗದಲ್ಲಿ ಅಲ್ಲಲ್ಲಿ ಕುಸಿತ ಉಂಟಾಗಿದ್ದು, ತೆರವುಗೊಳಿಲಾಗಿದೆ. ಹಾಗೆಯೇ ಜಿಲ್ಲೆಯ ಕೆಲವು ಕಡೆ ರಸ್ತೆ ಮತ್ತು ಸೇತುವೆ ಹಾನಿಯಾಗಿದ್ದು, ಸರಿಪಡಿಸುವ ಕಾರ್ಯ ನಡೆದಿದೆ. ತೊಂದರೆಗೆ ಒಳಗಾದ ಕುಟುಂಬದವರಿಗೆ ಆಹಾರ ಕಿಟ್ ಒದಗಿಸಲಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!