ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀಪಾವಳಿಯ ಸಡಗರದ ನಡುವೆಯೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಕುರಿತು ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಇಂದು ಭಾರಿ ಮಳೆ ಸುರಿಯುವ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಲಾಗಿದೆ.
ಯೆಲ್ಲೋ ಅಲರ್ಟ್ ಘೋಷಣೆ
ಬೆಂಗಳೂರು ನಗರದ ದೀಪಾವಳಿ ಸಂಭ್ರಮಕ್ಕೆ ವರುಣ ಅಡ್ಡಿಪಡಿಸಲಿದ್ದು, ನಗರಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇಂದು ಮಧ್ಯಾಹ್ನ ಅಥವಾ ಸಂಜೆಯ ವೇಳೆಗೆ ಗುಡುಗು ಸಹಿತ ಮಳೆ ಬೀಳುವ ಸಾಧ್ಯತೆಯಿದೆ.
ಯೆಲ್ಲೋ ಅಲರ್ಟ್ ಘೋಷಣೆಯಾಗಿರುವ ಜಿಲ್ಲೆಗಳ ವಿವರ ಇಂತಿದೆ:
ದಕ್ಷಿಣ ಒಳನಾಡು: ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ರಾಮನಗರ, ಕೋಲಾರ, ಹಾಸನ.
ಕರಾವಳಿ: ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ.
ಮೀನುಗಾರರಿಗೆ ಎಚ್ಚರಿಕೆ
ಕರಾವಳಿ ಜಿಲ್ಲೆಗಳಾದ್ಯಂತ ಮಳೆಯ ಜೊತೆಗೆ ಗಾಳಿಯ ವೇಗವು ಹೆಚ್ಚಾಗುವ ಸಾಧ್ಯತೆಯಿದೆ. ಗಾಳಿಯು ಗಂಟೆಗೆ 30 ರಿಂದ 40 ಕಿ.ಮೀ. ವೇಗದಲ್ಲಿ ಬೀಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.