ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಹವಾಮಾನದಲ್ಲಿ ಏಕಾಏಕಿ ಬದಲಾವಣೆ ಕಾಣಿಸಿಕೊಂಡಿದ್ದು, ಒಂದೆಡೆ ಭಾರೀ ಮಳೆಯ ಎಚ್ಚರಿಕೆ, ಮತ್ತೊಂದೆಡೆ ತೀವ್ರ ಚಳಿ ಮತ್ತು ದಟ್ಟ ಮಂಜು ಜನರನ್ನ ಕನ್ಫ್ಯೂಶನ್ ನಲ್ಲಿಟ್ಟಿದೆ. ಭಾರತ ಹವಾಮಾನ ಇಲಾಖೆ ಇತ್ತೀಚಿನ ಮುನ್ಸೂಚನೆಯಂತೆ, ನೈಋತ್ಯ ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ದಕ್ಷಿಣ ಭಾರತದ ಹಲವು ಕರಾವಳಿ ಪ್ರದೇಶಗಳಲ್ಲಿ ಮಳೆ ಚುರುಕುಗೊಂಡಿದೆ.
ತಮಿಳುನಾಡು, ದಕ್ಷಿಣ ಕರಾವಳಿ ಆಂಧ್ರಪ್ರದೇಶ, ರಾಯಲಸೀಮಾ ಹಾಗೂ ಕೇರಳ ಭಾಗಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದ್ದು, ಕೆಲವೆಡೆ ಭಾರೀ ಮಳೆಯ ನಿರೀಕ್ಷೆಯಿದೆ.
ಈ ನಡುವೆ ಉತ್ತರ ಮತ್ತು ಪೂರ್ವ ಭಾರತದಲ್ಲಿ ತಾಪಮಾನ ಕುಸಿತ ಆರಂಭವಾಗಿದೆ. ಪಂಜಾಬ್ ಮತ್ತು ಹರಿಯಾಣದಲ್ಲಿ ಶೀತ ಅಲೆಗಳ ಎಚ್ಚರಿಕೆ ನೀಡಲಾಗಿದ್ದು, ಹಲವು ರಾಜ್ಯಗಳಲ್ಲಿ ಬೆಳಗಿನ ಸಮಯದಲ್ಲಿ ದಟ್ಟ ಮಂಜು ಬೀಳುವ ಸಾಧ್ಯತೆ ಇದೆ. ದಕ್ಷಿಣದಲ್ಲಿ ಬೆಂಗಳೂರು ಸೇರಿ ಕರ್ನಾಟಕದ ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಚದುರಾಗಿ ಮಳೆಯಾಗುತ್ತಿದೆ. ಮುಂದಿನ ನಾಲ್ಕು ದಿನಗಳಲ್ಲಿ ವಾಯುವ್ಯ, ಮಧ್ಯ ಹಾಗೂ ಪೂರ್ವ ಭಾರತದಲ್ಲಿ ಕನಿಷ್ಠ ತಾಪಮಾನ 2ರಿಂದ 4 ಡಿಗ್ರಿ ಸೆಲ್ಸಿಯಸ್ ಮಟ್ಟಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ಸೂಚಿಸಲಾಗಿದೆ.

