ಭಾರೀ ಮಳೆಗೆ ಹಿಮಾಚಲದಲ್ಲಿ ಬಲಿಯಾದವರ ಸಂಖ್ಯೆ 43, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಗೆ 43 ಮಂದಿ ಸಾವನ್ನಪ್ಪಿದ್ದು, ಕಳೆದ ಎರಡು ವಾರಗಳಲ್ಲಿ ಸುಮಾರು 80 ಮಂದಿ ಗಾಯಗೊಂಡಿದ್ದಾರೆ. ಕೆಲವರು ಕಾಣೆಯಾಗಿರುವ ವರದಿಗಳೂ ಬಂದಿವೆ. ಗುಡ್ಡಗಾಡು ಪ್ರದೇಶದಲ್ಲಿ 150ಕ್ಕೂ ಹೆಚ್ಚು ರಸ್ತೆಗಳನ್ನು ಮುಚ್ಚಲಾಗಿದೆ. ಜೂನ್ 24 ಹಿಮಾಚಲದಲ್ಲಿ ಮುಂಗಾರು ಆರಂಭವಾದಾಗಿನಿಂದ ಒಂದಿಲ್ಲೊಂದು ಅವಘಡ ಉಂಟಾಗಿದೆ.  ಭೀಕರ ಮಳೆ, ಪ್ರವಾಹ, ಮಳೆಯಿಂದಾಗಿ ರಸ್ತೆ ಅಪಘಾತ, ನೀರಿನಲ್ಲಿ ಮುಳುಗುವಿಕೆ, ಬೆಂಕಿ, ಹಾವು ಕಡಿತ, ವಿದ್ಯುದಾಘಾತಗಳಲ್ಲಿ ಸುಮಾರು 43 ಮಂದಿ ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲದೆ 352ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ-ಪಾಸ್ತಿ ಹಾನಿಯಾಗಿರುವುದಾಗಿ ವರದಿಯಾಗಿದೆ.

ಗುರುವಾರ ರಾತ್ರಿಯಿಂದ ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ಹವಾಮಾನ ಇಲಾಖೆ ಜುಲೈ 9ರವರೆಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಮಳೆಯಿಂದಾಗಿ ಶುಕ್ರವಾರ ಶಿಮ್ಲಾ-ಚಂಡೀಗಢದಲ್ಲಿ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಭೂಕುಸಿತದಿಂದಾಗಿ ಹಲವು ರಸ್ತೆಗಳು ಬಂದ್ ಆಗಿವೆ.

ಮುಂದಿನ ಎರಡು ದಿನಗಳಲ್ಲಿ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಹರಿಯಾಣ, ಉತ್ತರಾಖಂಡ, ಬಿಹಾರ, ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶ, ಮಣಿಪುರ, ನಾಗಾಲ್ಯಾಂಡ್, ಒಡಿಶಾ, ಜಾರ್ಖಂಡ್, ಜಮ್ಮು ಮತ್ತು ಕಾಶ್ಮೀರದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಭಾರೀ ಮಳೆಗೆ ಕೇರಳದ ವಿವಿಧೆಡೆ 8 ಮಂದಿ ಸಾವನ್ನಪ್ಪಿದ್ದಾರೆ. ಭಾರೀ ಮಳೆಯಿಂದಾಗಿ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!