ಹೊಸದಿಗಂತ ಡಿಜಿಟಲ್ ಡೆಸ್ಕ್:
ರಸ್ತೆ ಅಪಘಾತಕ್ಕೊಳಗಾಗಿ, ಸದ್ಯ ಮನೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರನ್ನು ಮಾಜಿ ಕ್ರಿಕೆಟಿಗರಾದ ಸುರೇಶ್ ರೈನಾ, ಹರ್ಭಜನ್ ಸಿಂಗ್ ಹಾಗೂ ಶ್ರೀಶಾಂತ್ ಭೇಟಿ ಮಾಡಿ ಕುಶಲೋಪರಿ ನಡೆಸಿದ್ದಾರೆ.
ಈಗಾಗಲೇ ಹಲವು ಕ್ರಿಕೆಟಿಗರು ರಿಷಭ್ ಪಂತ್ ಮನೆಗೆ ಭೇಟಿ ನೀಡಿ, ಅವರ ಆರೋಗ್ಯ ಯೋಗಕ್ಷೇಮ ವಿಚಾರಿಸಿದ್ದು, ಕೆಲದಿನಗಳ ಹಿಂದಷ್ಟೇ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್, ಪಂತ್ ಮನೆಗೆ ಭೇಟಿ ನೀಡಿ ಅವರಿಗೆ ಸ್ಪೂರ್ತಿ ತುಂಬುವ ಕೆಲಸ ಮಾಡಿದ್ದರು.
ಇದೀಗ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರರಾದ ಸುರೇಶ್ ರೈನಾ, ಹರ್ಭಜನ್ ಸಿಂಗ್ ಹಾಗೂ ಎಸ್. ಶ್ರೀಶಾಂತ್ ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ.
ಮಾಜಿ ಕ್ರಿಕೆಟಿಗ ರಿಷಭ್ ಪಂತ್ ಜತೆಗಿರುವ ಫೋಟೋವನ್ನು ಸುರೇಶ್ ರೈನಾ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ, ಬೇಗ ಚೇತರಿಸಿಕೊಳ್ಳಲಿ ಎಂದು ಶುಭಹಾರೈಸಿದ್ದಾಗಿ ತಿಳಿಸಿದ್ದಾರೆ. ಇನ್ನು ಶ್ರೀಶಾಂತ್, ಪಂತ್‌ಗೆ ನಿಮ್ಮಲ್ಲಿ ನೀವು ವಿಶ್ವಾಸದಿಂದಿರಿ ಹಾಗೂ ದೃತಿಗೆಡಬೇಡಿ ಎಂದು ಕಿವಿಮಾತು ಹೇಳಿದ್ದಾರೆ.
ಸಹೋದರತ್ವವೇ ಎಲ್ಲವು, ಆದಷ್ಟು ಬೇಗ ಹಾಗೂ ಚೆನ್ನಾಗಿ ಗುಣಮುಖರಾಗಿ ಎಂದು ಸುರೇಶ್ ರೈನಾ ಶುಭಹಾರೈಸಿದ್ದಾರೆ. ಇನ್ನು ಎಸ್. ಶ್ರೀಶಾಂತ್ ಕೂಡಾ, ಪಂತ್ ಆದಷ್ಟು ಬೇಗ ಗಾಯದಿಂದ ಗುಣಮುಖರಾಗಲಿ ಎಂದು ಶುಭ ಹಾರೈಸಿದ್ದಾರೆ.