ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಹೊಸ ಸಿನಿಮಾದ ಲುಕ್ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ‘ರಕ್ಕಸಪುರದೋಳ್’ ಎಂಬ ಶೀರ್ಷಿಕೆಯ ನೂತನ ಚಿತ್ರದಲ್ಲಿ ಅವರು ಕ್ರೋಧ ಭರಿತ ಪೋಲೀಸ್ ಅಧಿಕಾರಿಯ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಈ ಪೋಸ್ಟರ್ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹೊತ್ತಿ ಉರಿಯುವ ಬೆಂಕಿಯ ಪೈಪೋಟಿಯಲ್ಲಿ ಧೈರ್ಯ ಮತ್ತು ರೋಷದ ಅಕ್ಷರಶಃ ರೂಪದಲ್ಲಿ ರಾಜ್ ಶೆಟ್ಟಿ ಕಾಣಿಸಿಕೊಂಡಿರುವ ಈ ಲುಕ್‌ಗೆ “ಬೀದಿ ಬೀದಿಗಳಲ್ಲಿ ಭಯ ಕಾರ್ಯಭಾರ ಮಾಡುವಾಗ ಅವನು ರೋಷದಲ್ಲಿ ಮುನ್ನುಗ್ಗುತ್ತಾನೆ” ಎಂಬ ಟ್ಯಾಗ್‌ಲೈನ್ ಕೂಡ ನೀಡಿದ್ದಾರೆ. ಈ ಮೂಲಕ ಸಿನಿಮಾದ ಕಥೆ ಏನಿರಬಹುದು ಎಂಬ ನಿರೀಕ್ಷೆ ಇದೆ.
ಪೋಲೀಸ್ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ
ಈ ಚಿತ್ರದ ಮೂಲಕ ರಾಜ್ ಬಿ ಶೆಟ್ಟಿ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯ ಶಕ್ತಿಶಾಲಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ತಮ್ಮ ಹಿಂದಿನ ಪಾತ್ರಗಳಿಗಿಂತ ಭಿನ್ನವಾಗಿ, ಜನರನ್ನು ಚಿತ್ರಮಂದಿರಕ್ಕೆ ಸೆಳೆಯುವಂತ ಕಥಾ ಹಂದರವಿದೆ ಎಂದು ಅವರು ಹೇಳಿದ್ದಾರೆ.
ಚಿತ್ರವನ್ನು ನಿರ್ದೇಶಿಸುತ್ತಿರುವವರು ರವಿ ಸಾರಂಗ. ಅವರು ಕಳೆದ 10 ವರ್ಷಗಳಿಂದ ನಿರ್ದೇಶಕ ಜೋಗಿ ಪ್ರೇಮ್ ಅವರೊಂದಿಗೆ ಕಥೆ ಮತ್ತು ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕಿಯರಾಗಿ ಸ್ವಾತಿಷ್ಠ ಕೃಷ್ಣ ಹಾಗೂ ಅರ್ಚನಾ ಕೊಟ್ಟಿಗೆ ಕಾಣಿಸಲಿದ್ದಾರೆ. ಬಿಗ್ ಬಜೆಟ್ ಸಾಹಸ ದೃಶ್ಯಗಳಿಗಾಗಿ ಹೆಸರಾಗಿರುವ ಡಾ. ರವಿವರ್ಮ ಚಿತ್ರ ನಿರ್ಮಾಣ ಹೊಣೆ ಹೊತ್ತಿದ್ದಾರೆ. ಸಂಗೀತ ನಿರ್ದೇಶಕರಾಗಿ ಅರ್ಜುನ್ ಜನ್ಯಾ ಸೇರಿದ್ದಾರೆ.
ಸದ್ಯಕ್ಕೆ ಪೋಸ್ಟರ್ ಮಾತ್ರ ಲಭ್ಯವಾಗಿದ್ದು, ಟ್ರೈಲರ್ ಮತ್ತು ಚಿತ್ರ ಬಿಡುಗಡೆ ದಿನಾಂಕವನ್ನು ಇನ್ನಷ್ಟೇ ಘೋಷಿಸಬೇಕಿದೆ. ಆದರೆ ಈ ಬಾರಿಯ ರಾಜ್ ಶೆಟ್ಟಿ ಸ್ಟೈಲ್ ಪೋಲೀಸ್ ಪಾತ್ರದ ಮೂಲಕ ಚಿತ್ರರಸಿಕರನ್ನು ರಂಜಿಸುವುದಂತೂ ಖಂಡಿತ.