ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಗುರುತು ಮೂಡಿಸಿರುವ ರಕ್ಷಿತ್ ಶೆಟ್ಟಿ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಬಳಿಕ ಅವರು ಹೊಸ ಪ್ರಾಜೆಕ್ಟ್‌ಗಳಲ್ಲಿ ಕಾಣಿಸಿಲ್ಲ ಎಂಬ ಚರ್ಚೆಯ ನಡುವೆಯೇ, ‘ರಿಚರ್ಡ್ ಆಂಟನಿ’ ಸಿನಿಮಾ ಕುರಿತು ರಾಜ್ ಬಿ. ಶೆಟ್ಟಿ ನೀಡಿದ ಹೇಳಿಕೆ ಇದೀಗ ಹೊಸ ಕುತೂಹಲಕ್ಕೆ ಕಾರಣವಾಗಿದೆ.
ರಾಜ್ ಬಿ. ಶೆಟ್ಟಿ ನಟಿಸಿರುವ ‘45’ ಸಿನಿಮಾದ ಪ್ರಚಾರದ ವೇಳೆ ಅವರು ನೀಡಿದ ಸಂದರ್ಶನದಲ್ಲಿ ರಕ್ಷಿತ್ ಶೆಟ್ಟಿ ಕುರಿತು ಪ್ರಶ್ನೆ ಕೇಳಲಾಗಿದೆ. ಈ ವೇಳೆ ಇಬ್ಬರ ನಡುವೆ ಅಸಮಾಧಾನವಿದೆ ಎಂಬ ವದಂತಿಗಳನ್ನು ರಾಜ್ ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ. ಎಲ್ಲರ ಚಿತ್ರಗಳಲ್ಲಿ ಕೆಲಸ ಮಾಡಲು ತಾನು ಸಿದ್ಧನಿದ್ದೇನೆ ಎಂದು ಹೇಳಿದ ಅವರು, ‘ರಕ್ಷಿತ್ ಅವರು ರಿಚರ್ಡ್ ಆಂಟನಿ ಸ್ಟಾರ್ಟ್ ಮಾಡಿದ್ರು ಅಂದ್ರೆ’ ಎಂದು ಏನನ್ನೋ ಹೇಳಲು ರಾಜ್ ಮುಂದಾದರು. ಆದ್ರೆ ಅದರಲ್ಲಿ ಕೆಲಸ ಮಾಡಲು ತಯಾರಿದ್ದೇನೆ ಎಂಬರ್ಥದ ಮಾತುಗಳನ್ನು ಆಡಿದ್ದಾರೆ ಎನ್ನಲಾಗುತ್ತಿದೆ.
ಆದರೆ ರಾಜ್ ಬಳಸಿದ ‘ಮಾಡಿದ್ರು ಅಂದ್ರೆ’ ಎಂಬ ಪದಗಳು ಅಭಿಮಾನಿಗಳ ಗಮನ ಸೆಳೆದಿವೆ. ಇದರ ಮೂಲಕ ಸಿನಿಮಾ ಕೆಲಸ ಇನ್ನೂ ಅಧಿಕೃತವಾಗಿ ಆರಂಭವಾಗಿಲ್ಲವೇ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಮೂಡಿವೆ. ಈ ಹೇಳಿಕೆಯ ವಿಡಿಯೋಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ‘ರಿಚರ್ಡ್ ಆಂಟನಿ’ ಬಿಡುಗಡೆ ಯಾವಾಗ ಎಂಬ ಚರ್ಚೆ ಮತ್ತೆ ಜೀವ ಪಡೆದಿದೆ. ರಕ್ಷಿತ್ ಶೆಟ್ಟಿ ಮುಂದಿನ ಹೆಜ್ಜೆಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಈ ಬೆಳವಣಿಗೆ ಇನ್ನಷ್ಟು ನಿರೀಕ್ಷೆ ಮತ್ತು ಗೊಂದಲ ಎರಡನ್ನೂ ತಂದಿದೆ.

