ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ‘ದಿ ರಾಜಾ ಸಾಬ್’ ಚಿತ್ರ ಇಂದು (ಜನವರಿ 9) ಸಂಕ್ರಾಂತಿ ಹಬ್ಬದ ಸಂಭ್ರಮದ ನಡುವೆ ವಿಶ್ವದಾದ್ಯಂತ ಅದ್ದೂರಿಯಾಗಿ ತೆರೆಕಂಡಿದೆ. ಮೊದಲ ಬಾರಿಗೆ ಪ್ರಭಾಸ್ ಹಾರರ್-ಕಾಮಿಡಿ ಜಾನರ್‌ನಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಅತೀವ ಕುತೂಹಲ ಮೂಡಿಸಿದ್ದು, ಚಿತ್ರಮಂದಿರಗಳ ಮುಂದೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಈ ಸಿನಿಮಾದಲ್ಲಿ ಪ್ರಭಾಸ್ ಮೊಸಳೆಯೊಂದಿಗೆ ಹೋರಾಡುವ ರೋಚಕ ದೃಶ್ಯವೊಂದಿದೆ. ಈ ದೃಶ್ಯಕ್ಕೆ ಅಭಿಮಾನಿಗಳು ಎಷ್ಟರಮಟ್ಟಿಗೆ ಫಿದಾ ಆಗಿದ್ದಾರೆ ಎಂದರೆ, ಥಿಯೇಟರ್‌ಗೆ ಮೊಸಳೆಯ ಪ್ರತಿಕೃತಿಯನ್ನೇ ಹೊತ್ತು ತಂದಿದ್ದಾರೆ! ಟ್ರೇಲರ್‌ನಲ್ಲಿ ಹೈಲೈಟ್ ಆಗಿದ್ದ ಈ ಫೈಟ್ ಸೀನ್ ಅನ್ನು ಸಂಭ್ರಮಿಸಲು ಅಭಿಮಾನಿಗಳು ನಕಲಿ ಮೊಸಳೆಯೊಂದಿಗೆ ಜೈಕಾರ ಹಾಕುತ್ತಾ ಚಿತ್ರಮಂದಿರದ ಒಳಗೆ ಬಂದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಪ್ರಭಾಸ್ ಮೇಲಿರುವ ಅಭಿಮಾನ ಹಾಗೂ ವೈರಲ್ ಆಗಬೇಕೆಂಬ ಹಂಬಲ ಎರಡೂ ಇಲ್ಲಿ ಎದ್ದು ಕಾಣುತ್ತಿದೆ.
ಮಾರುತಿ ನಿರ್ದೇಶನದ ಈ ಚಿತ್ರ ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ವಿಶೇಷವೆಂದರೆ, ಇದೇ ಸಮಯದಲ್ಲಿ ಬಿಡುಗಡೆಯಾಗಬೇಕಿದ್ದ ‘ಜನ ನಾಯಗನ್’ ಸಿನಿಮಾಗೆ ಸೆನ್ಸಾರ್ ಪ್ರಮಾಣಪತ್ರ ಸಿಗದ ಕಾರಣ ಅದರ ಬಿಡುಗಡೆ ರದ್ದಾಗಿದೆ. ಇದು ‘ದಿ ರಾಜಾ ಸಾಬ್’ ಚಿತ್ರಕ್ಕೆ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಲಾಭವಾಗಿ ಪರಿಣಮಿಸಿದ್ದು, ಪೈಪೋಟಿ ಇಲ್ಲದೆ ಸಿನಿಮಾ ಮುನ್ನುಗ್ಗುತ್ತಿದೆ.
ಸಂಜಯ್ ದತ್, ಬೋಮನ್ ಇರಾನಿ, ನಿಧಿ ಅಗರ್ವಾಲ್ ಮತ್ತು ಮಾಳವಿಕಾ ಮೋಹನನ್ ಅಂತಹ ಘಟಾನುಘಟಿ ಕಲಾವಿದರು ಈ ಚಿತ್ರದಲ್ಲಿದ್ದಾರೆ. ಮೊದಲ ದಿನದ ಕಲೆಕ್ಷನ್ ಅಬ್ಬರದಿಂದ ಕೂಡಿದ್ದರೂ, ಸಿನಿಮಾ ನೋಡಿದ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಾರರ್ ಮತ್ತು ಕಾಮಿಡಿಯ ಸಮ್ಮಿಶ್ರಣ ಕೆಲವರಿಗೆ ಇಷ್ಟವಾದರೆ, ಇನ್ನು ಕೆಲವರು ಕಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

