ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ರಾಜಕೀಯ ಬಗ್ಗೆ ಕೇಂದ್ರ ಸಚಿವ ರಾಜೀವ ಚಂದ್ರಶೇಖರ್ ಅವರು ಟೀಕಿಸಿದ್ದಾರೆ. ಕಾಂಗ್ರೆಸ್ ಸರ್ಕಾರವು ಆಟೊ ರಿಕ್ಷಾ ಸಬ್ಸಿಡಿ ಯೋಜನೆಯಲ್ಲೂ ತುಷ್ಟೀಕರಣ ನಡೆಸುತ್ತಿರುವುದಾಗಿ ಹೇಳಿರುವ ಅವರು, ಇದೊಂದು ಸರ್ಕಾರಿ ಪ್ರಾಯೋಜಿತ ಮತಾಂತರ ಕಾರ್ಯ ಎಂದು ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಟ್ವಿಟರ್‌ನಲ್ಲಿ ಟ್ವೀಟ್ ಮಾಡಿರುವ ಅವರು ಜಾಹೀರಾತಿನ ಪ್ರಕಟಣೆಯನ್ನು ಲಗತ್ತಿಸಿ ಜೊತೆಗೆ ಕರ್ನಾಟಕದಲ್ಲಿ ರಾಹುಲ್ ಗಾಂಧಿಯವರ ಕಾಂಗ್ರೆಸ್ ಸರ್ಕಾರವು ಕೆಲವು ಸಮುದಾಯಗಳಿಗೆ ಹೇಗೆ ಲಂಚ ನೀಡಿ, ತುಷ್ಟೀಕರಣದ ರಾಜಕೀಯವನ್ನು ನಡೆಸುತ್ತಿದೆ ಎಂಬುದನ್ನು ವಿವರಿಸಿದ್ದಾರೆ.
ಜನರು ಸಬ್ಸಿಡಿ ಯೋಜನೆ ಅಡಿಯಲ್ಲಿ 6 ಲಕ್ಷ ಮೌಲ್ಯದ ವಾಹನವನ್ನು 3 ಲಕ್ಷಕ್ಕೆ ಖರೀದಿಸಬಹುದು. ಕೂಡಲೇ 5 ಲಕ್ಷಕ್ಕೆ ಮಾರಾಟ ಮಾಡಿ 2 ಲಕ್ಷ ಲಾಭ ಪಡೆಯಬಹುದು. ಈ ಮೂಲಕ ಕಾಂಗ್ರೆಸ್ ತುಷ್ಟೀಕರಣದ ರಾಜಕೀಯ ನಡೆಸುತ್ತಿದೆ. ಅಲ್ಲದೇ ಈ ಸೌಲಭ್ಯವು ಹಿಂದೂಯೇತರ ಸಮುದಾಯಗಳಿಗೆ ಮಾತ್ರ ಲಭ್ಯವಿದ್ದು, ಬಡ ಹಿಂದೂಗಳಿಗೆ ಈ ಸೌಲಭ್ಯವಿಲ್ಲ ಎಂಬುದನ್ನು ಟೀಕಿಸಿದ್ದಾರೆ.
ಸಮಸ್ತ ಕನ್ನಡಿಗರಿಗೆ ಮೀಸಲಾದ ಸಾರ್ವಜನಿಕ ಸಂಪನ್ಮೂಲಗಳನ್ನು ಒಂದು ನಿರ್ದಿಷ್ಟ ಸಮುದಾಯಕ್ಕೆ ನಾಚಿಕೆಯಿಲ್ಲದೇ, ಲಂಚದ ರೂಪದಂತೆ ನೀಡಿ ತಾರತಮ್ಯ ಮಾಡುವ ಈ ಕಾಂಗ್ರೆಸ್ ಪಕ್ಷ ಸಂವಿಧಾನದ 14 ನೇ ವಿಧಿಯನ್ನು ಉಲ್ಲಂಘಿಸುತ್ತಿದೆ. ಹಾಗೂ ಇದೇ ಪಕ್ಷ ವಿದೇಶಗಳಲ್ಲಿ ಭಾರತದ ಸಂವಿಧಾನ ಅಪಾಯದಲ್ಲಿದೆ ಎಂದು ಬೊಬ್ಬೆ ಹೊಡೆಯುತ್ತದೆ ಎಂದು ಕಿಡಿ ಕಾರಿದ್ದಾರೆ.
ರಾಜ್ಯ ಸರ್ಕಾರಿ ಪ್ರಾಯೋಜಿತ ಮತಾಂತರ ಕಾರ್ಯಕ್ರಮವಿದಾಗಿದೆ ಎಂದು ದೂರಿದರಲ್ಲದೆ, ಇದು ಯು.ಪಿ.ಎ/ಐ.ಎನ್.ಡಿ.ಐ.ಎ ಮೈತ್ರಿಕೂಟದ ಕುಟುಂಬ ರಾಜಕಾರಣದ ಹಾಗೂ ಭ್ರಷ್ಟ ರಾಜಕಾರಣದ ಹೂರಣ ಎಂದಿದ್ದಾರೆ.
ರಾಹುಲ್ ಗಾಂಧಿಯವರ ಕಾಂಗ್ರೆಸ್ ಕರ್ನಾಟಕದಲ್ಲಿ ಕೆಲವು ನಿರ್ದಿಷ್ಟ ಸಮುದಾಯಗಳಿಗೆ ಹೇಗೆ ಲಂಚ ನೀಡಿ, ತುಷ್ಟೀಕರಣದ ರಾಜಕಾರಣವನ್ನು ಮಾಡುತ್ತದೆ ಎಂಬುದಕ್ಕೆ ಮತ್ತೊಂದು ಸ್ಪಷ್ಟ ಉದಾಹರಣೆ ಇಲ್ಲಿದೆ.
₹6 ಲಕ್ಷದ ವಾಹನವನ್ನು ಶೇ.50ರಷ್ಟು ಸಬ್ಸಿಡಿ ಬಳಸಿಕೊಂಡು ಖರೀದಿಸಿ, ಮರು ದಿನವೇ ₹5 ಲಕ್ಷಕ್ಕೆ ಆ ವಾಹನವನ್ನು ಮಾರಿ, ಕೂತಲ್ಲೇ ಬರೋಬ್ಬರಿ ₹2…
— Rajeev Chandrasekhar 🇮🇳 (@Rajeev_GoI) September 8, 2023