ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಅಗ್ರ ಬೈಕರ್‌ಗಳಲ್ಲಿ ಒಬ್ಬರೆನಿಸಿರುವ ಬೆಂಗಳೂರಿನ ರಾಜೇಂದ್ರ ಆರ್ ಭಾನುವಾರದಂದು ನಡೆದ ಎಫ್‌ಎಂಎಸ್‌ಸಿಐ ರೇ ಭಾರತೀಯ ರಾಷ್ಟ್ರೀಯ ರ‍್ಯಾಲಿ ಸ್ಪ್ರಿಂಟ್ ಚಾಂಪಿಯನ್‌ಶಿಪ್ ದಕ್ಷಿಣ ವಲಯ ಸುತ್ತಿನಲ್ಲಿ ಚಾಂಪಿಯನ್‌ಶಿಪ್ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ.
550 ಸಿಸಿ ಮುಕ್ತ ವಿಭಾಗದಲ್ಲಿ ರಾಜೇಂದ್ರ ಅತ್ಯುತ್ತಮ ಸಮಯದೊಂದಿಗೆ ಮೊದಲ ಸ್ಥಾನ ಪಡೆದರು. ನಗರದ ಹೊರವಲಯದಲ್ಲಿರುವ ಸರ್ಜಾಪುರದಲ್ಲಿ ನಡೆದ ಸ್ಪರ್ಧೆಯಲ್ಲಿ 10 ಕಿಲೋ ಮೀಟರ್ ದೂರವನ್ನು ಕೇವಲ 7 ನಿಮಿಷ 33.59 ಸೆಕೆಂಡ್‌ಗಳಲ್ಲಿ ಪೂರ್ತಿಗೊಳಿಸಿ ಅಚ್ಚರಿ ಮೂಡಿಸಿದರು.
ರ‍್ಯಾಲಿಯ ಟಿ20 ಮಾದರಿ ಎಂದೇ ಕರೆಸಿಕೊಳ್ಳುವ ಸ್ಪ್ರಿಂಟ್ ರೇಸ್‌ನಲ್ಲಿ ಭಾರತದ ಅಗ್ರ ಬೈಕರ್‌ಗಳು ಕಣಕ್ಕಿಳಿದು, ರೇಸ್ ಅನ್ನು ಯಶಸ್ವಿಗೊಳಿಸಿದರು. ಸುಹೇಲ್ ಅಹ್ಮದ್ ಮೂರು ಬಾರಿ ಪೋಡಿಯಂ ಮೇಲೆ ಕಾಣಿಸಿಕೊಂಡರು. ಮೊದಲು 550 ಸಿಸಿ ವರೆಗಿನ ವಿಭಾಗದ ‘ಎ’ ಗುಂಪಿನಲ್ಲಿ ಮೊದಲ ಸ್ಥಾನ ಪಡೆದ ಸುಹೇಲ್, ಆ ಬಳಿಕ ಬುಲೆಟ್ ವಿಭಾಗದಲ್ಲಿ 2ನೇ ಹಾಗೂ 261 ಸಿಸಿ ಯಿಂದ 400ಸಿಸಿ ವರೆಗಿನ ರೇಸ್‌ನಲ್ಲಿ 3ನೇ ಸ್ಥಾನ ಪಡೆದರು.
550 ಸಿಸಿ ಓಪನ್ ವಿಭಾಗ ಸೇರಿ ಎರಡು ವಿಭಾಗಗಳಲ್ಲಿ ಸಿನಾನ್ ಫ್ರಾನ್ಸಿಸ್ ಸಹ ಅಮೂಲ್ಯ ಸಾಧನೆ ಮಾಡಿದರು.
ಮಹಿಳೆಯರ 260 ಸಿಸಿ ವರೆಗಿನ ವಿಭಾಗದಲ್ಲಿ ಯುವ ಹಾಗೂ ಉತ್ಸಾಹಿ ಸ್ಪರ್ಧಿಗಳನ್ನು ಹಿಂದಿಕ್ಕಿ ರೀಹಾನಾ ಪ್ರಶಸ್ತಿಗೆ ಭಾಜನರಾದರು. ರೀಹಾನಾ 8 ನಿಮಿಷ 49.29 ಸೆಕೆಂಡ್‌ಗಳಲ್ಲಿ ರೇಸ್ ಅನ್ನು ಪೂರ್ತಿಗೊಳಿಸಿದರು.