ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಚಿತ್ರರಂಗಕ್ಕೆ ಪ್ರವೇಶಿಸಿ ಇಂದಿಗೆ (ಆಗಸ್ಟ್ 15) ಸರಿಯಾಗಿ 50 ವರ್ಷಗಳಾದವು. ಚಿತ್ರರಂಗದಲ್ಲಿ ರಜನೀಕಾಂತ್ 50 ವರ್ಷ ಪೂರೈಸಿದ್ದಕ್ಕೆ ಹಲವಾರು ಮಂದಿ ದಿಗ್ಗಜರು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಪ್ರಧಾನಿ ಮೋದಿ ಸಹ ರಜನೀಕಾಂತ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ರಜನೀಕಾಂತ್ ಅವರೊಟ್ಟಿಗಿನ ಚಿತ್ರವನ್ನು ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ‘ಚಿತ್ರ ಜಗತ್ತಿನಲ್ಲಿ 50 ವರ್ಷ ಪೂರೈಸಿರುವುದಕ್ಕೆರಜನೀಕಾಂತ್ ಅವರಿಗೆ ಅಭಿನಂದನೆಗಳು. ಅವರ ವೈವಿಧ್ಯಮಯ ಪಾತ್ರಗಳು ವಿವಿಧ ತಲೆಮಾರುಗಳ ಕಾಲ ಜನರ ಮನಸ್ಸಿನಲ್ಲಿ ಶಾಶ್ವತವಾದ ಪ್ರಭಾವ ಬೀರಿವೆ. ಅವರ ಈ ಸಿನಿ ಪ್ರಯಾಣವು ಐತಿಹಾಸಿಕವಾದುದ್ದಾಗಿದೆ. ಮುಂಬರುವ ದಿನಗಳಲ್ಲಿ ಅವರಿಗೆ ಯಶಸ್ಸು ಮತ್ತು ಉತ್ತಮ ಆರೋಗ್ಯ ಸಿಗಲಿ ಎಂದು ಹಾರೈಸುತ್ತೇನೆ’ ಎಂದಿದ್ದಾರೆ.
1975 ರಲ್ಲಿ ಬಿಡುಗಡೆ ಆದ ‘ಅಪೂರ್ವ ರಾಗಂಗಳ್’ ಸಿನಿಮಾ ಮೂಲಕ ರಜನೀಕಾಂತ್ ಚಿತ್ರರಂಗ ಪ್ರವೇಶಿಸಿದರು. ಆ ಸಿನಿಮಾನಲ್ಲಿ ಕಮಲ್ ಹಾಸನ್ ನಾಯಕ, ರಜನೀಕಾಂತ್ ಪ್ರತಿನಾಯಕ. ಆ ಸಿನಿಮಾದಿಂದ ರಜನೀಕಾಂತ್ ಹಿಂತಿರುಗಿ ನೋಡಿದ್ದೇ ಇಲ್ಲ. ಅಂದಿನಿಂದ ಇಂದಿನ ವರೆಗೂ ಸ್ಟಾರ್ ಆಗಿಯೇ ಮೆರೆದಿದ್ದಾರೆ ಇಷ್ಟು ಸುದೀರ್ಘ ಅವಧಿಯ ವರೆಗೆ ಸ್ಟಾರ್ ಆಗಿ ಮೆರೆದ ಮತ್ತೊಬ್ಬ ನಟ ಭಾರತದಲ್ಲಿ ಇರಲಿಕ್ಕಿಲ್ಲ. ಕೂಲಿ ಆಗಿ ಆ ನಂತರ ಬಸ್ ಕಂಡಕ್ಟರ್ ಆಗಿದ್ದ ಸಾಮಾನ್ಯ ಕುಟುಂಬದ ಸಾಮಾನ್ಯ ವ್ಯಕ್ತಿ ಸೂಪರ್ ಸ್ಟಾರ್ ರಜನೀಕಾಂತ್ ಆಗಿ ಬೆಳೆದ ಕತೆ ಭಾರತದ ಕೋಟ್ಯಂತರ ಮಂದಿಗೆ ಸ್ಪೂರ್ತಿ.
ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಹೀಗೆ ಭಾರತದ ಪ್ರಮುಖ ಸಿನಿಮಾ ರಂಗಗಳಲ್ಲಿಯೂ ನಟಿಸಿರುವ ರಜನೀಕಾಂತ್ ಹಲವಾರು ರೀತಿಯ ಪಾತ್ರಗಳಲ್ಲಿ ನಟನೆ ಮಾಡಿದ್ದಾರೆ. ಈ ಐವತ್ತು ವರ್ಷಗಳಲ್ಲಿ 170ಕ್ಕೂ ಹೆಚ್ಚು ಸಿನಿಮಾಗಳಲ್ಲಿ ರಜನೀಕಾಂತ್ ನಟಿಸಿದ್ದಾರೆ.
ಈಗ ರಜನೀಕಾಂತ್ ಅವರಿಗೆ 74 ವರ್ಷ ವಯಸ್ಸು. ಇಷ್ಟು ವಯಸ್ಸಿನಲ್ಲೂ ಈಗಲೂ ಸಹ ಚುರುಕಾಗಿ ನಟಿಸುತ್ತಾ, ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಮೂರು ತಲೆಮಾರಿನ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ರಜನೀಕಾಂತ್, ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ್ದನ್ನು ಹಲವಾರು ಸೆಲೆಬ್ರಿಟಿಗಳು ಸಂಭ್ರಮಿಸಿದ್ದಾರೆ.