ತಂತ್ರಜ್ಞಾನದ ಕ್ರಾಂತಿಗೆ ಬುನಾದಿ ಹಾಕಿದ್ದು ರಾಜೀವ್ ಗಾಂಧಿ: ಡಿ.ಕೆ.ಶಿವಕುಮಾರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ರಾಜಕೀಯ ಇತಿಹಾಸದಲ್ಲಿ ರಾಜೀವ್ ಗಾಂಧಿಯವರು ನೀಡಿದ ಕೊಡುಗೆಗಳು ಅಳಿಸಿಹೋಗದಂತಹವು. ಪ್ರಜಾಪ್ರಭುತ್ವವನ್ನು ಬಲಪಡಿಸುವತ್ತ ಹಾಗೂ ತಂತ್ರಜ್ಞಾನ ಕ್ರಾಂತಿಗೆ ದಾರಿ ಮಾಡಿಕೊಡುವತ್ತ ಅವರು ತಂದುಕೊಟ್ಟ ಬದಲಾವಣೆಗಳು ಯುವಕರಿಗೆ ಹೊಸ ಚೈತನ್ಯವನ್ನು ನೀಡಿವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಅವರು ಭಾನುವಾರ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ “ರನ್ ಫಾರ್ ರಾಜೀವ್” ಮ್ಯಾರಥಾನ್‌ಗೆ ಚಾಲನೆ ನೀಡಿ ಮಾತನಾಡಿ, ರಾಜೀವ್ ಗಾಂಧಿಯವರ ಸೇವೆಯನ್ನು ಸ್ಮರಿಸಿದರು.

ಮತದಾನದ ಹಕ್ಕು ಮೊದಲು 21 ವರ್ಷ ವಯಸ್ಸಿಗೆ ಮಾತ್ರ ಸಿಗುತ್ತಿತ್ತು. ಆದರೆ, ರಾಜೀವ್ ಗಾಂಧಿ ಅವರು ಅದನ್ನು 18 ವರ್ಷಕ್ಕೆ ಇಳಿಸಿದರು. ಇಂದಿನ ಯುವಕರಿಗೆ ಪ್ರಜಾಪ್ರಭುತ್ವ ಕಾಯುವ ಹಕ್ಕನ್ನು ನೀಡಿದ ಮಹತ್ವದ ನಿರ್ಧಾರ ಅದು. ಆ ಸಮಯದಲ್ಲಿ ವಿರೋಧ ಪಕ್ಷಗಳು ಈ ನಿರ್ಧಾರವನ್ನು ಟೀಕಿಸಿದರೂ, ಅದು ದೇಶದ ಭವಿಷ್ಯಕ್ಕೆ ದೊಡ್ಡ ಕೊಡುಗೆಯಾಯಿತು ಎಂದರು.

ತಂತ್ರಜ್ಞಾನ ಕ್ರಾಂತಿ ಕುರಿತು ಮಾತನಾಡಿದ ಶಿವಕುಮಾರ್, ನಮ್ಮ ಕಾಲದಲ್ಲಿ ಫೋನ್ ಪಡೆಯಲು ನಾಲ್ಕು ವರ್ಷ ಕಾಯಬೇಕಾಗುತ್ತಿತ್ತು. ಆದರೆ, ಇಂದಿನ ತಲೆಮಾರಿಗೆ ಮೊಬೈಲ್‌ಗಳು ಸುಲಭವಾಗಿ ಸಿಗುತ್ತಿವೆ. ಇದಕ್ಕೆ ಕಾರಣವಾಗಿದ್ದು ರಾಜೀವ್ ಗಾಂಧಿಯವರ ದೃಷ್ಟಿ. ದೇಶದ ಐಕ್ಯತೆ, ಸಮಗ್ರತೆ ಮತ್ತು ಶಾಂತಿಗಾಗಿ ಪ್ರಾಣವನ್ನೇ ತ್ಯಾಗ ಮಾಡಿದ ನಾಯಕರ ನೆನಪಿನಲ್ಲಿ ನೀವು ಹೆಜ್ಜೆ ಹಾಕಿರುವುದು ಹೃದಯ ಸ್ಪರ್ಶಿಸುತ್ತದೆ ಎಂದು ಹೇಳಿದರು.

ಮ್ಯಾರಥಾನ್‌ನಲ್ಲಿ ಸುಮಾರು 20 ಸಾವಿರ ಯುವಕರು ಭಾಗವಹಿಸಿದ್ದು, ಯುವಕರ ಉತ್ಸಾಹವು ಕಾರ್ಯಕ್ರಮವನ್ನು ಭರ್ಜರಿಯಾಗಿ ಯಶಸ್ವಿಗೊಳಿಸಿದೆ. ಯುವ ನಾಯಕರೇ ಈ ಕಾರ್ಯಕ್ರಮ ಆಯೋಜಿಸಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ರಾಜೀವ್ ಗಾಂಧಿಯವರ ಕನಸುಗಳನ್ನು ನನಸು ಮಾಡಲು ಯುವ ಶಕ್ತಿ ಮುಂದಾಗಬೇಕು ಎಂದು ಶಿವಕುಮಾರ್ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!