ಹೊಸದಿಗಂತ ಡಿಜಿಟಲ್ ಡೆಸ್ಕ್;
ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯ ಸತ್ನಾಮ್ ಸಿಂಗ್ ಸಂಧು ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇದರಿಂದ ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯರ ಬಲ 87ಕ್ಕೆ ಏರಿಕೆಯಾಗಿದೆ.
ನಾಮನಿರ್ದೇಶಿತ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದವರು ಆರು ತಿಂಗಳೊಳಗಾಗಿ ಯಾವುದಾದರೂ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆಯೇ ಎನ್ನುವುದನ್ನು ಸಂಸತ್ತಿಗೆ ತಿಳಿಸಬೇಕು. ಅದರಂತೆ ಜುಲೈ 31ರೊಳಗೆ ಸತ್ನಾಮ್ ಸಿಂಗ್ ಸಂಧು ತಮ್ಮ ನಿರ್ಧಾರ ತಿಳಿಸಬೇಕಿತ್ತು. ಹೀಗಾಗಿ ಅವರು ಬಿಜೆಪಿಗೆ ಸೇಪರ್ಡೆಯಾಗುತ್ತಿರುವುದಾಗಿ ಹೇಳಿದ್ದಾರೆ.
2024ರ ಜನವರಿ 31ರಂದು ಪ್ರಮಾಣವಚನ ಸ್ವೀಕರಿಸಿದ್ದ ಸಂಧು 6 ತಿಂಗಳ ಗಡುವು ಮುಗಿಯುವ ಮುನ್ನವೇ ಬಿಜೆಪಿ ಸೇರ್ಪಡೆಯಾಗುವುದಾಗಿ ತಿಳಿಸಿದ್ದಾರೆ. ಆದ್ದರಿಂದ ಅವರನ್ನು ಬಿಜೆಪಿ ಸದಸ್ಯ ಎಂದು ಪರಿಗಣಿಸಲಾಗುತ್ತದೆ ಎಂದು ರಾಜ್ಯಸಭೆ ಪ್ರಕಟಣೆಯಲ್ಲಿ ತಿಳಿಸಿದೆ.
8 ಮಂದಿ ನಾಮನಿರ್ದೇಶಿತ ಸಂಸದರ ಪೈಕಿ, ಸತ್ನಾಮ್ ಸಿಂಗ್ ಸಂಧು ಹಾಗೂ ಜಮ್ಮು ಮತ್ತು ಕಾಶ್ಮೀರದ ಗುಲಾಂ ಅಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದು, ನ್ಯಾಯಮೂರ್ತಿ ರಂಜನ್ ಗೊಗೋಯಿ, ಡಿ. ವಿರೇಂದ್ರ ಹೆಗ್ಗಡೆ, ಇಳಯರಾಜ, ಸುಧಾಮೂರ್ತಿ, ವಿಜಯೇಂದ್ರ ಪ್ರಸಾದ್ ಹಾಗೂ ಪಿ.ಟಿ. ಉಷಾ ಇನ್ನೂ ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗಿಲ್ಲ.
ಸತ್ನಾಮ್ ಸಿಂಗ್ ಸಂಧು ಭಾರತದ ಪ್ರಮುಖ ಶಿಕ್ಷಣ ತಜ್ಞರಲ್ಲಿ ಒಬ್ಬರು. ಅವರು ಕೃಷಿಕರೂ ಹೌದು. ಸತ್ನಾಮ್ ಸಿಂಗ್ ಸಂಧು 2001ರಲ್ಲಿ ಮೊಹಾಲಿಯ ಲ್ಯಾಂಡ್ರಾನ್ನಲ್ಲಿ ಚಂಡೀಗಢ ಗ್ರೂಪ್ ಆಫ್ ಕಾಲೇಜ್ಸ್ (ಸಿಜಿಸಿ) ಮತ್ತು 2012ರಲ್ಲಿ ಚಂಡೀಗಢ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ್ದಾರೆ. ಅವರ ಆರಂಭಿಕ ಜೀವನವು ಕಷ್ಟಗಳಿಂದ ಕೂಡಿತ್ತು. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪಡೆಯಲೂ ಹೆಣಗಾಡಿದ್ದರು. ಇದೀಗ ಅವರು ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನೂ ನೀಡುತ್ತಾರೆ. ಜನಸಾಮಾನ್ಯರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುಧಾರಿಸುವ ಪ್ರಯತ್ನಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ದೇಶದಲ್ಲಿ ಕೋಮು ಸೌಹಾರ್ದತೆಯನ್ನು ಹೆಚ್ಚಿಸಲು ಅವರು ಇಂಡಿಯನ್ ಮೈನಾರಿಟೀಸ್ ಫೌಂಡೇಶನ್ ಮತ್ತು ನ್ಯೂ ಇಂಡಿಯಾ ಡೆವಲಪ್ಮೆಂಟ್ ಫೌಂಡೇಶನ್ (Indian Minorities Foundation and New India Development) Foundation) ಎಂಬ ಎರಡು ಎನ್ಜಿಒ ನಡೆಸುತ್ತಿದ್ದಾರೆ.