ದಿಗಂತ ವರದಿ ವಿಜಯಪುರ:
ರಾಮಮಂದಿರ ಉದ್ಘಾಟನೆಗೆ ನಮಗೆ ಆಹ್ವಾನ ಇಲ್ಲ ಎಂಬ ವಿರೋಧ ಪಕ್ಷಗಳ ಹೇಳಿಕೆ ಸರಿಯಲ್ಲ. ರಾಮ ರಾಜಕೀಯ ವಿಷಯ ವಸ್ತುವಾಗಿಲ್ಲ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮಿಜಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಶ್ರೀರಾಮ ಮಂದಿರ ವ್ಯಾಜ್ಯ ಹುಟ್ಟಿಕೊಂಡಿದ್ದು, 500 ವರ್ಷಗಳ ಹಿಂದೆ ಸ್ವಾತಂತ್ರ್ಯ ಬಂದು 75 ವರ್ಷಗಳಾಯಿತು. ದೇಶದಲ್ಲಿ ಅತಿ ಹೆಚ್ಚು ವರ್ಷಗಳ ಕಾಲ ಸರ್ಕಾರ ಮಾಡಿದ್ದು ಯಾರು ? ಎಂದು ಪ್ರಶ್ನೆ ಮಾಡಿದರು.
ರಾಮಮಂದಿರ ಮಾಡಿಕೊಡಿ ಎಂದು ಅವರ ಬಳಿ ಹಲವಾರು ಬಾರಿ ಕೇಳಲಾಗಿತ್ತು. ತಾವೂ ಮಾಡಲ್ಲ. ಯಾರಾದರೂ ಮಾಡಿದರೆ ಅದಕ್ಕೂ ಅಡ್ಡಗಾಲು ಹಾಕುತ್ತಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಗುಡುಗಿದರು.
ವಿವಾದಿತ ಸ್ಥಳದಲ್ಲಿ ಶ್ರೀರಾಮನ ಪೂಜೆಗೆ ಅವಕಾಶ ಕೊಟ್ಟಿದ್ದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಎಂಬ ಕಾಂಗ್ರೆಸ್ಸಿಗರ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಶ್ರೀಗಳು,
ಅದರಿಂದ ಏನು ಆಗುವುದು. ರಾಮ ರಾಜ್ಯ ಮಾಡದೆ ಇರುವ ಅಪವಾದವನ್ನು ಅವರು ಹಂಚಿಕೊಳ್ಳಲು ತಯಾರಿದ್ದಾರಾ ? ಲಾಭ ಇದ್ದರೆ ನಮಗೆ ತಪ್ಪುಗಳಿದ್ದರೆ ಅವರಿಗೆ ಮಾತ್ರ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಶ್ರೀಗಳು ವಾಗ್ದಾಳಿ ನಡೆಸಿದರು.
ಇಲ್ಲಿ ರಾಜಕೀಯ ಯಾರು ಮಾಡುತ್ತಿದ್ದಾರೆ ? ಎಂಬುವುದು ಎಲ್ಲರಿಗೂ ಗೊತ್ತಾಗುತ್ತದೆ ಎಂದರು. ಲೋಕಸಭಾ ಚುನಾವಣೆ ಹಿನ್ನೆಲೆಯಾಗಿ ರಾಮ ಮಂದಿರ ಉದ್ಘಾಟನೆ ಮಾಡಲಾಗುತ್ತಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಶ್ರೀಗಳು, ಲೋಕಸಭೆ, ವಿಧಾನಸಭಾ ಚುನಾವಣೆ ಇರಬಹುದು. ಆದರೆ ಅವುಗಳ ಅಧಿಕಾರ ಅವಧಿ ಐದು ವರ್ಷ ಮಾತ್ರ. ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ರಾಮಮಂದಿರ ಉದ್ಘಾಟನೆ ಮಾಡುತ್ತಾರೆ ಎಂಬ ಮಾತಲ್ಲಿ ಹುರುಳಿಲ್ಲ. ಮಂದಿರ ನಿರ್ಮಾಣವನ್ನು ಯಾವುದೇ ಪರಿಸ್ಥಿತಿಯಲ್ಲಿ ತಡೆಯಬೇಕೆಂಬ ಹುನ್ನಾರ ಇದು,
ಇದರಲ್ಲಿ ಯಾವುದೇ ಹುರುಳಿಲ್ಲ ಎಂದ ಎಂದರು.
ಗೋಧ್ರಾ ಮಾದರಿಯ ಮರುಕಳಿಸಬಹುದು ಎಂದು ಬಿ.ಕೆ. ಹರಿಪ್ರಸಾದ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ರೀತಿ ಹೇಳಿಕೆ ನೀಡುವವರು ಭಯೋತ್ಪಾದಕರು. ಹೇಳಿಕೆಗಳ ಮೂಲಕ ಭಯೋತ್ಪಾದನೆ ಮಾಡಬಾರದು. ಹೇಳಿಕೆ ನೀಡಿ ಭಯ ಹುಟ್ಟಿಸುತ್ತಿದ್ದಾರೆ ಎಂದರು.
ಇನ್ನೂ ಇವರು ಯಾಕೆ ನೇರವಾಗಿ ಇಲಾಖೆಗಳಿಗೆ ಹೋಗಿ ಮಾಹಿತಿ ನೀಡ್ತಿಲ್ಲ ? ಇವರು ಯಾರನ್ನು ರಕ್ಷಣೆ ಮಾಡ್ತಿದ್ದಾರೆ? ಕೇಳಿದರೆ ಹೇಳ್ತೀವಿ ಅನ್ನೋದು ವಿಧ್ವಂಸಕ ಕೃತ್ಯ ನಡೆಯಲಿ ಅಂದಾಗಾಯ್ತಲ್ಲ ? ಇವರು ವಿಧ್ವಂಸಕ ಕೃತ್ಯ ನಡೆಸುವವರನ್ನ ರಕ್ಷಣೆ ಮಾಡ್ತಿದ್ದಾರಾ ? ಎಂದು ಪ್ರಶ್ನಿಸಿದರು.
ಇದಕ್ಕೂ ಮೊದಲು ನಗರದ ಜ್ಞಾನ ಯೋಗಾಶ್ರಮಕ್ಕೆ ಪೇಜಾವರ ಶ್ರೀಗಳು ಭೇಟಿ ನೀಡಿದರು. ಸಿದ್ಧೇಶ್ವರ ಸ್ವಾಮೀಜಿಗಳ ಗುರುಗಳಾದ ಮಲ್ಲಿಕಾರ್ಜುನ ಮಹಾಸ್ವಾಮಿ ಅವರ ಗದ್ದುಗೆ ದರ್ಶನ ಮಾಡಿದರು. ಪೇಜಾವರ ಸ್ವಾಮೀಜಿ ಸಿದ್ಧೇಶ್ವರ ಸ್ವಾಮೀಜಿಗಳ ಪಾರ್ಥಿವ ಶರೀರ ಮೆರವಣಿಗೆ ಮಾಡಿದ ಪೆಟ್ಟಿಗೆಯ ದರ್ಶನ ಪಡೆದರು. ಈ ವೇಳೆ ಶ್ರೀಗಳು ಆಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ, ಸೇರಿದಂತೆ ಇನ್ನಿತರ ಸ್ವಾಮೀಜಿಗಳು ಇದ್ದರು.