ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ ಪಕ್ಷಾತೀತವಾಗಿ ಆಗಬೇಕಿತ್ತು: ಎಂ.ಬಿ. ಪಾಟೀಲ

ದಿಗಂತ ವರದಿ ವಿಜಯಪುರ:

ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ ಪಕ್ಷಾತೀತವಾಗಿ ಆಗಬೇಕಿತ್ತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆದರೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮವನ್ನು ಬಿಜೆಪಿ ಅವರು ತಮ್ಮ ಪಕ್ಷದ ಕಾರ್ಯಕ್ರಮದ ರೀತಿಯಲ್ಲಿ ಮಾಡಿದ್ದಾರೆ ಎಂದು ದೂರಿದರು.

ಇದು ಚುನಾವಣೆಗೋಸ್ಕರ ಮಾಡಿದ್ದಾಗಿದ್ದು, ರಾಮಮಂದಿರ ಉದ್ಘಾಟನೆ ರಾಜಕೀಯ ಕಾರ್ಯಕ್ರಮ ಆಯ್ತು. ಹೀಗಾಗಿ ನಮ್ಮ ವಿರೋಧವಿದೆ ಹೊರತು ರಾಮಮಂದಿರಕ್ಕಲ್ಲ ಎಂದರು.

ಆ ಕಾರಣದಿಂದ ನಾವು ಭಾಗವಹಿಸಿಲ್ಲ. ನಾವು ಇಚ್ಚಿಸಿದಾಗ ಖರ್ಗೆ ಅವರು, ಸಿದ್ದರಾಮಯ್ಯ, ರಾಹುಲ್ ಗಾಂಧಿಯವರು ಸೇರಿದಂತೆ ಎಲ್ಲರೂ ರಾಮಮಂದಿರಕ್ಕೆ ಹೋಗುತ್ತೇವೆ ಎಂದರು. ರಾಮನಿಗೆ ಯಾರದು ವಿರೋಧವಿಲ್ಲ. ನಾವು ರಾಮನನ್ನು ಗೌರವಿಸುತ್ತೇವೆ, ಶಿವನನ್ನ ಗೌರವಿಸುತ್ತೇವೆ. ಬುದ್ಧನನ್ನ ಗೌರವಿಸುತ್ತೇವೆ, ಅಲ್ಲಾನನ್ನು ಗೌರವಿಸುತ್ತೇವೆ, ಗುರು ನಾನಕರನ್ನು,‌ ಮಹಾವೀರರನ್ನು ನಾವು ಗೌರವಿಸುತ್ತೇವೆ ನಾವು ಎಲ್ಲರನ್ನ ಗೌರವಿಸುತ್ತೇವೆ ಎಂದರು.

ಲೋಕಸಭಾ ಚುನಾವಣೆ ಕ್ಷೇತ್ರಗಳ ಗೆಲ್ಲಲು ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ಟಾಸ್ಕ್ ನೀಡಿರೋ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ನಮಗೆ ಯಾವಾಗಲೂ ಕೂಡ ಜವಾಬ್ದಾರಿ ಇರುತ್ತದೆ ಟಾಸ್ಕ್ ಅಂತಲ್ಲ.
ನೈತಿಕವಾಗಿ ಜವಾಬ್ದಾರಿ ಇರುತ್ತದೆ. ಸಚಿವರಿಗೂ, ಶಾಸಕರಿಗೂ ಕೂಡ ಜವಾಬ್ದಾರಿ ಇರುತ್ತದೆ ಎಂದರು.

ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಹೈಕಮಾಂಡ್ ಬಯಸಿದರೆ ಸಚಿವರು ಸ್ಪರ್ಧೆ ಮಾಡಬೇಕು.
ಎಂ.ಬಿ. ಪಾಟೀಲ ಸ್ಪರ್ಧೆ ಮಾಡುವಂತೆ ಹೈಕಮಾಂಡ್ ಬಯಸಿದರೆ ನಾನು ಸ್ಪರ್ಧೆ ಮಾಡಬೇಕು ಎಂದರು.

ಮೂವರು ಡಿಸಿಎಂ ನೇಮಕ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ಈ ವಿಚಾರ ಪಕ್ಷದ ನಾಲ್ಕು ಗೋಡೆಗಳ ಮಧ್ಯೆ ವಿಚಾರ ಮಾಡುವಂಥದ್ದು, ಇದು ಬಹಿರಂಗವಾಗಿ ಮಾತನಾಡುವ ವಿಚಾರ ಅಲ್ಲ ಎಂದರು.

ನಿಗಮ ಮಂಡಳಿ ನೇಮಕ ವಿಚಾರದಲ್ಲಿ ನಾವು ಹೈಕಮಾಂಡ್ ಗುಲಾಮರಲ್ಲ ಎಂಬ ಸಚಿವ ರಾಜಣ್ಣ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ರಾಜಣ್ಣ ಏನು ಹೇಳಿದ್ದಾರೆ ಎಂಬುದು ನನ್ನ ಗಮನಕ್ಕೆ ಇಲ್ಲ. ನಮ್ಮ ಹೈಕಮಾಂಡ್ ಏನು ಹೇಳುತ್ತದೆ ಅದನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ. ಈಗ ಶಾಸಕರು ಹಾಗೂ ಇತರರನ್ನು ಪರಿಗಣನೆ ಮಾಡಿದ್ದಾರೆ. ಉಳಿದವರನ್ನ ಮಾಡುವಾಗ ರಾಜಣ್ಣನವರನ್ನು ಸಹ ಪರಿಗಣನೆ ಮಾಡುತ್ತಾರೆಂಬ ನಂಬಿಕೆ ಇದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!