ರಾಮಮಂದಿರ ಲೋಕಾರ್ಪಣೆಗೆ ದಿನಗಣನೆ: ಅಯೋಧ್ಯೆಯಲ್ಲಿ ಭಕ್ತರಿಗಾಗಿ ಟೆಂಟ್ ಸಿಟಿ ನಿರ್ಮಾಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಮ ಮೂರ್ತಿ ಪ್ರತಿಷ್ಠಾಪನೆಗೆ ಅಯೋಧ್ಯೆ ಸಜ್ಜಾಗುತ್ತಿದ್ದು, ಉದ್ಘಾಟನೆ ಸಮಾರಂಭಕ್ಕೆ ಆಗಮಿಸುವ ಭಕ್ತರಿಗಾಗಿ ಟೆಂಟ್‌ ನಗರಗಳನ್ನು ನಿರ್ಮಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜನವರಿ 22, 2024 ರಂದು ರಾಮ ಮಂದಿರ ಉದ್ಘಾಟನೆ ಸಮಾರಂಭ ನಡೆಯಲಿದೆ. ಈ ಸುಸಂದರ್ಭಕ್ಕೆ ಸಾಕ್ಷಿಯಾಗಲು ಭಾರತದಾದ್ಯಂತ ಹಾಗೂ ವಿಶ್ವದಾದ್ಯಂತ ಸಾವಿರಾರು ಭಕ್ತರು ಅಯೋಧ್ಯೆಗೆ ಆಗಮಿಸುವ ನಿರೀಕ್ಷೆಯಿದೆ. ಅದಕ್ಕಾಗಿ ಮಜಾ ಗುಪ್ತರ್ ಘಾಟ್, ಬಾಗ್ ಬಿಜೆಸಿ ಮತ್ತು ಬ್ರಹ್ಮಕುಂಡ್ ಮುಂತಾದ ಸ್ಥಳಗಳಲ್ಲಿ
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮತ್ತು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು ಟೆಂಟ್ ಸಿಟಿಗಳನ್ನು ಸ್ಥಾಪಿಸುತ್ತಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

ಮಜಾ ಗುಪ್ತರ್ ಘಾಟ್‌ನ 20 ಎಕರೆ ಜಾಗದಲ್ಲಿ ಟೆಂಟ್ ಸಿಟಿ ನಿರ್ಮಿಸಲಾಗುತ್ತಿದ್ದು, ಇದರಿಂದ ಸುಮಾರು 20,000 ರಿಂದ 25,000 ಭಕ್ತರು ತಂಗಲು ಅನುಕೂಲವಾಗಲಿದೆ. ಬ್ರಹ್ಮಕುಂಡದಲ್ಲಿ 30 ಸಾವಿರ ಭಕ್ತರು ತಂಗಲು ಸಾಧ್ಯವಾಗುವ 35 ದೊಡ್ಡ ಟೆಂಟ್‌ಗಳನ್ನು ಮತ್ತು ಬಾಘ್‌ ಬಿಜೆಸಿಯ 25 ಎಕರೆ ಪ್ರದೇಶಲ್ಲಿ 25 ಸಾವಿರ ಭಕ್ತರು ಉಳಿದುಕೊಳ್ಳಬಹುದಾದ ಟೆಂಟ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಸತ್ಯೇಂದ್ರ ಸಿಂಗ್‌ ಹೇಳಿದರು.

ಭಕ್ತರಿಗಾಗಿ ಕರಸೇವಕಪುರಂ ಮತ್ತು ಮಣಿಪುರಂ ದಾಸ್ ಕಂಟೋನ್ಮೆಂಟ್‌ ಪ್ರದೇಶದಲ್ಲಿಯೂ ಇದೇ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಅಲ್ಲದೆ ಚಳಿಯ ವಾತಾವರಣ ಇರುವ ಹಿನ್ನೆಲೆ ಭಕ್ತರಿಗೆ ಹಾಸಿಗೆ- ಹೊದಿಕೆಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ಈ ಟೆಂಟ್ ಗಳಲ್ಲಿ ಆಹಾರ ಸಂಗ್ರಹಣೆ, ವೈದ್ಯಕೀಯ ಶಿಬಿರಗಳು ಮತ್ತು ಶೌಚಾಲಯಗಳ ವ್ಯವಸ್ಥೆ ಇರುತ್ತದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!