June 22, 2026
Monday, June 22, 2026
spot_img

ರಾಮಮಂದಿರ ದೇಣಿಗೆ ಹಗರಣ: ಹಣ ಎಣಿಕೆ ಕಾರ್ಯದಿಂದ 40 ಸಿಬ್ಬಂದಿ ವಜಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಭಕ್ತರು ನೀಡಿದ ಕಾಣಿಕೆ ಹಣ ಹಾಗೂ ಆಭರಣಗಳ ಎಣಿಕೆಯಲ್ಲಿ ಅಕ್ರಮ ಹಾಗೂ ಕಳ್ಳತನ ನಡೆದಿರುವ ಆರೋಪದ ಹಿನ್ನೆಲೆ ಎಣಿಕೆ ಪ್ರಕ್ರಿಯೆಯಲ್ಲಿದ್ದ 40 ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ.

ಅವರ ಜಾಗಕ್ಕೆ ಬ್ಯಾಂಕ್‌ ಟ್ರಸ್ಟ್‌ ಹೊಸಬರನ್ನು ನೇಮಕ ಮಾಡಿದ್ದು, ಕಟ್ಟುನಿಟ್ಟಿನ ಮೇಲ್ವಿಚಾರಣೆ ಇರಿಸಲಾಗಿದೆ. ಆರು ದಿನಗಳಿಂದ ಅಯೋಧ್ಯೆಯಲ್ಲಿಯೇ ಇರುವ ವಿಶೇಷ ತನಿಖಾ ತಂಡ ಇಂದು ತನ್ನ ಪ್ರಾಥಮಿಕ ವರದಿಯನ್ನು ಸಿಎಂ ಯೋಗಿ ಆದಿತ್ಯನಾಥ್‌ಗೆ ನೀಡಲಿದೆ.

ಮೂವರು ಸದಸ್ಯರ ಎಸ್‌ಐಟಿ ತಂಡವು ದೇಣಿಗೆಯ ಹಳೆಯ ದಾಖಲೆಗಳು, ಸಿಸಿಟಿವಿ ದೃಶ್ಯಾವಳಿಗಳು, ನಗದು ಎಣಿಕೆ ಮಾಡುವ ವಿಧಾನಗಳು ಮತ್ತು ಆಭರಣಗಳ ವಿವರಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದೆ. ದೇವಸ್ಥಾನದ ಟ್ರಸ್ಟ್‌ಗೆ ಸಂಬಂಧಿಸಿದ ಪ್ರಮುಖರು, ಅರ್ಚಕರು, ಬ್ಯಾಂಕ್ ಅಧಿಕಾರಿಗಳು ಮತ್ತು ನಗದು ನಿರ್ವಹಣಾ ಸಿಬ್ಬಂದಿ ಸೇರಿದಂತೆ 100 ಕ್ಕೂ ಹೆಚ್ಚು ಜನರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

ಈ ತನಿಖೆಯು ಕೇವಲ ಕಾಣಿಕೆ ಹಣದ ದುರುಪಯೋಗಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಟ್ರಸ್ಟ್ ವಿವಿಧ ಹಂತಗಳಲ್ಲಿ ಮಾಡಿದ ಖರೀದಿಗಳು ಮತ್ತು ದೇವಸ್ಥಾನದ ನಿರ್ಮಾಣ ಸಾಮಗ್ರಿಗಳ ಖರೀದಿಯಲ್ಲಿ ನಡೆದಿರುವ ವ್ಯವಹಾರಗಳ ಮೇಲೂ ತನಿಖೆ ನಡೆಯುತ್ತಿದೆ.

ಕಳೆದ ವರ್ಷ ನಡೆದ ಕುಂಭಮೇಳದ ಸಮಯದಲ್ಲಿ ಅಯೋಧ್ಯೆಗೆ ದಿನಕ್ಕೆ 10 ಲಕ್ಷ ಭಕ್ತರು ಆಗಮಿಸುತ್ತಿದ್ದರು. ಪ್ರತೀ ಎರಡು ಗಂಟೆಗೊಮ್ಮೆ ದೇಣಿಗೆ ಡಬ್ಬಿ ತುಂಬಿ ಹೋಗುತ್ತಿತ್ತು. ಈ ಸಮಯದಲ್ಲಿ ದೊಡ್ಡ ಲೂಟಿ ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !