ಹೊಸದಿಗಂತ ವರದಿ,ಅಂಕೋಲಾ:
ಕೋಟ್ಯಾಂತರ ಜನರ ಶತಮಾನಗಳ ಕನಸಿನ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಅಯೋಧ್ಯೆಯಲ್ಲಿ ಭರದಿಂದ ಸಾಗಿದ್ದು ತಾಲೂಕಿನ ರಾಮನಗುಳಿಯ ರಾಮ ಪಾದುಕಾ ಮಂದಿರ ಮತ್ತು ಅರಬೈಲಿನ ಮಾರುತಿ ದೇವಸ್ಥಾನದ ಪವಿತ್ರ ಮೃತ್ತಿಕೆಯನ್ನು ಸಂಗ್ರಹಿಸಿ ರಾಮಜನ್ಮಭೂಮಿಗೆ ಕಳಿಸಿಕೊಡುವ ಕಾರ್ಯ ಆ ಭಾಗದ ಗ್ರಾಮಸ್ಥರಿಂದ ಸಂಭ್ರಮದಿಂದ ನಡೆಯಿತು.
ದೇವಾಲಯಗಳನ್ನು ಸ್ವಚ್ಛಗೊಳಿಸಿ , ವೇದ ಮೂರ್ತಿ ಗಣಪತಿ ಭಟ್ಟ ಅವರ ಪೌರೋಹಿತ್ಯದಲ್ಲಿ ಮೃತ್ತಿಕೆಯನ್ನು ಸಂಗ್ರಹಿಸಿ ವಿಶೇಷ ಪೂಜೆ ಸಲ್ಲಿಸಿ ಮೃತ್ತಿಕೆಯನ್ನು ರಾಮ ಮಂದಿರ ನಿರ್ಮಾಣ ಸ್ಥಳಕ್ಕೆ ರವಾನಿಸಲಾಯಿತು.
ರಾಮನಗುಳಿ, ಅರಬೈಲ್ ಸುತ್ತ ಮುತ್ತಲಿನ ನೂರಾರು ಸಂಖ್ಯೆಯ ರಾಮ ಭಕ್ತರು, ಊರಿನ ಹಿರಿಯರು ಗ್ರಾಮಸ್ಥರು ಪಾಲ್ಗೊಂಡು ಈ ವರ್ಷಾಂತ್ಯದಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣಗೊಂಡು ದೇವರ ಪ್ರತಿಷ್ಠಾಪನಾ ಕಾರ್ಯ ನಡೆದು ಭಕ್ತರಿಗೆ ದರ್ಶನ ಭಾಗ್ಯ ದೊರಕಲಿ ಎಂದು ಆಶಯ ವ್ಯಕ್ತಪಡಿಸಿದರು.