ದೇಶದೆಲ್ಲೆಡೆ ರಂಜಾನ್ ಸಂಭ್ರಮ: ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ

ಹೊಸದಿಗಂತ ಚಿತ್ರದುರ್ಗ

ನಗರದ ವಿವಿಧೆಡೆಗಳಲ್ಲಿ ಸೋಮವಾರ ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿಂದ ಪವಿತ್ರ ರಂಜಾನ್ ಹಬ್ಬ ಆಚರಣೆ ಮಾಡಿದರು. ಕಳೆದ ಒಂದು ತಿಂಗಳಿನಿಂದ ಉಪವಾಸ ವ್ರತ ಕೈಗೊಂಡಿದ್ದ ಅವರು, ರಂಜಾನ್ ಆಚರಣೆಯ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ತಮ್ಮ ಉಪವಾಸ ವ್ರತ ಅಂತ್ಯಗೊಳಿಸಿದರು.

ರಂಜಾನ್ ಮಾಸದ ಒಂದು ತಿಂಗಳ ಅವಧಿಯಲ್ಲಿ ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಏಳುತ್ತಿದ್ದ ಮುಸ್ಲಿಂ ಬಾಂಧವರು ಅಲ್ಲಾಹುಗೆ ಪ್ರಾರ್ಥನೆ ಸಲ್ಲಿಸಿ ಊಟ ಸೇವಿಸುತ್ತಿದ್ದರು. ಸೂರ್ಯೋದಯದ ನಂತರ ಮತ್ತೆ ಯಾವುದೇ ಆಹಾರ ಮುಟ್ಟುತ್ತಿರಲಿಲ್ಲ. ಸಂಜೆ ಸೂರ್ಯಾಸ್ತವಾದ ಮೇಲೆ ಮತ್ತೆ ಆಹಾರ ಸೇವನೆ ಮಾಡುವ ಮೂಲಕ ಒಂದು ತಿಂಗಳ ಕಾಲ ಉಪವಾಸ ವ್ರತ ನಡೆಸಿದರು. ಸೂರ್ಯೋದಯದಿಂದ ಸೂರ್ಯಾಸ್ತzವರೆಗಿನ ಅವಧಿಯಲ್ಲಿ ಪ್ರತಿ ದಿನ ಕಾಲ ಕಾಲಕ್ಕೆ ಅಲ್ಲಾಹುಗೆ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಯಾವುದೇ ಅನ್ನ, ಆಹಾರ ಸೇವಿಸುತ್ತಿರಲಿಲ್ಲ.

ರಂಜಾನ್ ಮಾಸದಲ್ಲಿ ತಿಂಗಳ ಪೂರ್ತಿ ಉಪವಾಸ ಮಾಡುವುದರಿಂದ ಜೀವನ ಸಾರ್ಥಕವಾಗುತ್ತದೆ. ಇಂತಹ ವ್ರತದಲ್ಲಿ ತೊಡಗುವುದರಿಂದ ಉಪವಾಸ ಮಾಡುವ ಸಾಧಕನನ್ನು ಪರಮಾತ್ಮನ ಬಳಿಯಲ್ಲಿ ಇರಿಸುತ್ತದೆ ಎಂಬುದು ಮುಸ್ಲೀಮರ ನಂಬಿಕೆ. ಉಪವಾಸ ವ್ರತ (ರೋಝಾ) ಆಚರಣೆ ಮಾಡುವುದರ ಉದ್ದೇಶ ಕೇವಲ ದೇಹವನ್ನು ಮಾತ್ರ ದಂಡಿಸುವುದಲ್ಲ. ಮನಸ್ಸು ಹಾಗೂ ಇಂದ್ರಿಯಾಗಳನ್ನು ನಿಯಂತ್ರಿಸುವುದೂ ಇದರ ಉದ್ದೇಶ. ಉಪವಾಸ ಮಾಡುವುದರಿಂದ ಮನುಷ್ಯನಿಗೆ ಉತ್ತಮ ಆರೋಗ್ಯ ಲಭಿಸುತ್ತದೆ. ಅಲ್ಲದೇ ಪರಮಾತ್ಮನ ಮೇಲೆ ವಿಶೇಷ ಕಾಳಜಿ ಉಂಟಾಗುತ್ತದೆ. ಇದರಿಂದ ದೈಹಿಕ ಹಾಗೂ ಮಾನಸಿಕವಾಗಿ ಪಾವಿತ್ರ್ಯತೆ ಲಭಿಸುತ್ತದೆ ಎಂಬುದು ವಾಡಿಕೆ.

ನಗರದ ದಾವಣಗೆರೆ ರಸ್ತೆಯ ಅಜಾದ್ ಮಿಲ್ ಬಳಿಯ ಈದ್ಗಾ ಮೈದಾನದಲ್ಲಿ ನೆರೆದ ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ಕುಳಿತು ಅಲ್ಲಾಹುಗೆ ಪ್ರಾರ್ಥನೆ ಸಲ್ಲಿಸಿದರು. ಇಂತಹ ಪ್ರಾರ್ಥನಾ ಸಮಯದಲ್ಲಿ ರಾಜನಾಗಲಿ, ಸೇವಕನಾಗಲಿ, ಬಡವನಾಗಲಿ, ಬಲ್ಲಿದನಾಗಲಿ, ವಿದ್ಯಾವಂತನಾಗಲಿ, ಅವಿದ್ಯಾವಂತನಾಗಲಿ, ಅಧಿಕಾರಿಯಾಗಲಿ, ಫಕೀರನಾಗಲಿ ಎಲ್ಲರೂ ಸಮಾನವಾಗಿ ಒಂದೇ ಕುಟುಂಬದ ಸದಸ್ಯರಂತೆ ಸಾಮಾಹಿಕವಾಗಿ ಕುಳಿತು ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆ ನಂತರ ಒಬ್ಬರಿಗೊಬ್ಬರು ಪರಸ್ಪರ ಆಲಂಗಿಸಿಕೊಳ್ಳುವ ಮೂಲಕ ಈದ್ ಮುಬಾರಕ್ ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ರಂಜಾನ್ ಆಚರಣೆಯ ಹಿನ್ನಲೆಯಲ್ಲಿ ಮುಸಲ್ಮಾನರ ಪ್ರತಿ ಮನೆಯಲ್ಲಿ ಸಡಗರ, ಸಂಭ್ರಮ ಮನೆ ಮಾಡಿತ್ತು. ಉಪವಾಸ ವ್ರತ ಅಂತ್ಯವಾದ ಕಾರಣ ಮನೆಗಳಲ್ಲಿ ವಿವಿಧ ರೀತಿಯ ಭೋಜನಗಳನ್ನು ತಯಾರಿಸಿ ಸವಿದರು. ಉಪವಾಸ ವ್ರತದಂತೆ ಮುಸ್ಲೀಮರು ರಂಜಾನ್ ಹಬ್ಬದಂದು ಆಚರಿಸುವ ಮತ್ತೊಂದು ಮುಖ್ಯ ಸಂಪ್ರದಾಯವೆಂದರೆ ಅತಿಥಿ ಸತ್ಕಾರ. ಹಬ್ಬದ ದಿನ ತಮ್ಮ ಮನೆಗೆ ಆಗಮಿಸುವ ಅತಿಥಿಗಳಿಗೆ ವಿವಿಧ ರೀತಿಯ ಭಕ್ಷ್ಯಭೋಜನಗಳನ್ನು ನೀಡಿ ಸತ್ಕರಿಸುತ್ತಾರೆ. ಹಬ್ಬದ ಸಲುವಾಗಿ ಪ್ರತಿಯೊಬ್ಬ ಮುಸಲ್ಮಾರೂ ಹೊಸ ಬಟ್ಟೆಗಳನ್ನು ಧರಿಸಿರುತ್ತಾನೆ. ಅಲ್ಲದೇ ತಾವು ದುಡಿದ ದುಡಿಮೆಯಲ್ಲಿ ಸ್ವಲ್ಪ ಭಾಗವನ್ನಾದರೂ ಬಡವರಿಗೆ, ದುರ್ಬಲರಿಗೆ ದಾನ ಮಾಡುವುದು ಹಬ್ಬದ ವಿಶೇಷಗಳಲ್ಲಿ ಒಂದು.

ಹಬ್ಬದ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ವಿವಿಧ ಬಟ್ಟೆ ಅಂಗಡಿಗಳಲ್ಲಿ ಬಗೆ ಬಗೆಯ ಉಡುಪುಗಳ ಖರೀದಿ ಭರಾಟೆಯಿಂದ ಸಾಗಿತ್ತು. ಬಟ್ಟೆ-ಬರೆ, ಚಪ್ಪಲಿ, ಅಲಂಕಾರಿಕ ವಸ್ತುಗಳು ಸೇರಿದಂತೆ ಮುಸ್ಲಿಂ ಮಹಿಳೆಯರು ವಿವಿಧ ವಸ್ತುಗಳನ್ನು ಖರೀದಿಸುತ್ತಿದ್ದ ದೃಶ್ಯಗಳು ನಗರದ ವಿವಿಧೆಡೆಗಳಲ್ಲಿ ಕಂಡುಬರುತ್ತಿದ್ದವು. ಪ್ರತಿ ದಿನ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ವಿವಿಧ ಬಗೆಯ ಆಹಾರ ಸವಿಯುತ್ತಿದ್ದ ಕಾರಣ ನಗರದ ವಿವಿಧೆಡೆಗಳಲ್ಲಿನ ಮಸೀದಿಗಳ ಬಳಿಯಲ್ಲಿ ನಾನಾ ರೀತಿಯ ಹಣ್ಣು ಹಂಪಲು, ತಿಂಡಿ ತಿನಿಸುಗಳನ್ನು ಮಾರಾಟ ಮಾಡಲು ಅನೇಕ ಅಂಗಡಿಗಳು ತಲೆ ಎತ್ತಿದ್ದವು.

ನಗರ ದಾವಣಗೆರೆ ರಸ್ತೆಯಲ್ಲಿನ ಈದ್ಗಾ ಮೈದಾನದಲ್ಲಿ ಮಂಗಳವಾರ ಬೆಳಗ್ಗೆ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಹಿರಿಯ ನ್ಯಾಯವಾದಿ ಬಿ.ಕೆ.ರೆಹಮತ್‌ವುಲ್ಲಾ, ಸಮಾಜದ ಮುಖಂಡರಾದ ಎಂ.ಕೆ.ತಾಜ್‌ಪೀರ್, ಖಾಸಿಂಆಲಿ, ಅಲ್ಲಾಭಕ್ಷ್ಮಿ ಸೇರಿದಂತೆ ಹಲವಾರು ಸಂಖ್ಯೆಯ ಮುಸ್ಲಿಂ ಬಾಂಧವರು ಹಾಜರಿದ್ದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!