ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀರಾಮನ ವ್ಯಕ್ತಿತ್ವದೊಂದಿಗೆ ರಾಮಾಯಣವು ಜನಮಾನಸದಲ್ಲಿ ಸ್ಥಿರವಾಗಿ ನಿಲ್ಲುವಂತಾಗಿದೆ. ರಾಮಾಯಣದ ಪ್ರತಿಯೊಂದು ಘಟನೆಯೂ ನಾಡಿನ ಜನತೆಗೆ ಪಾಠವಾಗಿದೆ ಎಂದು ಲೇಖಕಿ ಧನ್ಯಶ್ರೀ ಸರಳಿ ಅಭಿಪ್ರಾಯಪಟ್ಟರು.
ರಾಮಾಯಣ ವಾರಾಚರಣೆ ಸಮಿತಿ ಬದಿಯಡ್ಕ ಇವರ ನೇತೃತ್ವದಲ್ಲಿ ಶ್ರೀರಾಮಲೀಲಾ ಯೋಗ ಶಿಕ್ಷಣ ಕೇಂದ್ರದಲ್ಲಿ ಜರಗುತ್ತಿರುವ ರಾಮಾಯಣ ವಾರಾಚರಣೆಯ ಮೂರನೇ ಕಾರ್ಯಕ್ರಮದಲ್ಲಿ ಭಾನುವಾರ ಸಂಜೆ ದೀಪಪ್ರಜ್ವಲನೆಗೈದು ಅವರು ಮಾತನಾಡಿದರು.
ಹಿರಿಯರಾದ ಶ್ಯಾಮ ಆಳ್ವ ಕಡಾರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ರಾಮಾಯಣದ ವಿವಿಧ ಘಟನೆಗಳನ್ನು ವಿವರಿಸಿದರು.
ಮಂಜೇಶ್ವರ ಉಪಜಿಲ್ಲಾಖಜಾನೆಯ ಅಧಿಕಾರಿ ಕುಮಾರನ್ ಎಂ ಧಾರ್ಮಿಕ ಉಪನ್ಯಾಸವನ್ನು ನೀಡುತ್ತಾ ರಾಮಾಯಣದ ಘಟನೆಗಳು ನಮ್ಮ ನಿಜ ಜೀವನಕ್ಕೆ ಪಾಠವಾಗಿದೆ. ತಂದೆ ತಾಯಿ ಗುರುವಿನೊಂದಿಗೆ ಹೇಗಿರಬೇಕು ಎಂಬುದನ್ನು ಕಲಿಸಿಕೊಟ್ಟಿದೆ. ಶ್ರೀರಾಮನ ಚರಿತ್ರೆಯನ್ನು ಮಕ್ಕಳಿಗೆ ತಿಳಿಸಿದಾಗ ಅವರು ಬೆಳೆದು ದೊಡ್ಡವರಾದಾಗ ಶ್ರೀರಾಮನ ಗುಣವನ್ನು ಹೊಂದಲು ಸಾಧ್ಯವಿದೆ. ೧೩ರಿಂದ ೧೯ ವರ್ಷದೊಳಗಿನ ಪ್ರಾಯದಲ್ಲಿ ಮಕ್ಕಳಿಗೆ ಸರಿಯಾದ ಶಿಕ್ಷಣ ಲಭಿಸಬೇಕು. ಮಕ್ಕಳು ರಾಮಲಕ್ಷ್ಮಣರಂತೆ ಬೆಳೆಯಬೇಕು ಎಂದರು.
ಸಂಘಟಕರಾದ ಕರಿಂಬಿಲ ಲಕ್ಷ್ಮಣ ಪ್ರಭು ಸ್ವಾಗತಿಸಿ, ಬೇ.ಸೀ.ಗೋಪಾಲಕೃಷ್ಣ ವಂದಿಸಿದರು. ಪವನ್ ಕುಮಾರ್ ಪ್ರಾರ್ಥನೆ ಹಾಡಿದರು. ಅನುಪಮಾ ಕಾಡಮನೆ ನಿರೂಪಿಸಿದರು. ಯೋಗಶಿಕ್ಷಕರಾದ ಶಾರದಾ ಕಾಡಮನೆ, ಸೂರ್ಯನಾರಾಯಣ ವಳಮಲೆ ರಾಮತಾರಕ ಮಂತ್ರ ಜಪ ನಡೆಸಿಕೊಟ್ಟರು.