ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಎಲ್ಲಾ ಜಿಲ್ಲೆಗಳಲ್ಲಿನ ದೇವಾಲಯಗಳಲ್ಲಿ ರಾಮನವಮಿ ದಿನದಂದು 24 ಗಂಟೆಗಳ ಕಾಲ ರಾಮಚರಿತಮಾನಸ ಪಠಣ ಆಯೋಜಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶ ನೀಡಿದ್ದಾರೆ.
ಏಪ್ರಿಲ್ 5 ರಂದು ಮಧ್ಯಾಹ್ನ ಅಯೋಧ್ಯೆಯ ರಾಮ ಜನ್ಮಭೂಮಿ ದೇವಾಲಯದಲ್ಲಿ ಪ್ರಾರಂಭವಾಗುವ ಪಠಣವು ಏಪ್ರಿಲ್ 6 ರಂದು ಮಧ್ಯಾಹ್ನ 12 ಗಂಟೆಗೆ ರಾಮಲಲಾ ಮೂರ್ತಿಯ ‘ಸೂರ್ಯ ತಿಲಕ’ದೊಂದಿಗೆ ಮುಕ್ತಾಯಗೊಳ್ಳಲಿದೆ. ಇದಕ್ಕಾಗಿ ಎಲ್ಲಾ ಜಿಲ್ಲೆಗಳ ದೇವಾಲಯಗಳು ಅಗತ್ಯ ವ್ಯವಸ್ಥೆಗಳನ್ನು ಪ್ರಾರಂಭಿಸಿವೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ಬಲರಾಂಪುರದ ದೇವಿಪಟನ್ ದೇವಾಲಯ, ಸಹರಾನ್‌ಪುರದ ಶಾಕುಂಭರಿ ದೇವಿ ದೇವಾಲಯ ಮತ್ತು ಮಿರ್ಜಾಪುರದ ವಿಂಧ್ಯವಾಸಿನಿ ದೇವಿ ಧಾಮ ಸೇರಿದಂತೆ ಪ್ರಮುಖ ದೇವಿ ದೇವಾಲಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಸೂರ್ಯ ತಿಲಕ ವೀಕ್ಷಿಸಲು ದೇಶಾದ್ಯಂತ ಭಕ್ತರು ಅಯೋಧ್ಯೆಗೆ ಭೇಟಿ ನೀಡಬಹುದು. ಹಾಗಾಗಿ ಅವರಿಗೆ ಅನುಕೂಲತೆ ಹಾಗೂ ಸುರಕ್ಷತೆ ಒದಗಿಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಬೇಕು. ಎಲ್ಲಾ ದೇವಾಲಯಗಳಲ್ಲಿ ಸಾಕಷ್ಟು ಕುಡಿಯುವ ನೀರಿನ ಸೌಲಭ್ಯ ಮತ್ತು ಛತ್ರದ ವ್ಯವಸ್ಥೆ ಮಾಡಬೇಕು ಎಂದು ಆದಿತ್ಯನಾಥ್ ಸೂಚಿಸಿದ್ದಾರೆ.
ಅದೇ ರೀತಿ ದೇವಸ್ಥಾನಗಳ ಬಳಿ ಯಾವುದೇ ಮೊಟ್ಟೆ ಅಥವಾ ಮಾಂಸದ ಅಂಗಡಿಗಳಿಗೆ ಅನುಮತಿ ನೀಡಬಾರದು ಮತ್ತು ಅಕ್ರಮ ಗೋಹತ್ಯೆ ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆದೇಶಿಸಿದ್ದಾರೆ.