ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ (Rameshwaram Cafe) ಪ್ರಕರಣದ ತನಿಖೆಯನ್ನು ಅಧಿಕೃತವಾಗಿ ಇಂದಿನಿಂದ ಎನ್‌ಐಎ ಆರಂಭಿಸಿದೆ.
ಬಾಂಬ್ ಸ್ಪೋಟ ಸಂಬಂಧ ನಿನ್ನೆ ಎಫ್ಐಆರ್ ದಾಖಲು ಮಾಡಿದ್ದ ಎನ್ಐಎ (NIA) ಅಧಿಕಾರಿಗಳು ಇಂದು ಸಿಸಿಬಿಯಿಂದ ಕೇಸ್ ಫೈಲ್ ಪಡೆದು ತನಿಖೆಗೆ ಇಳಿದಿದ್ದಾರೆ. ಸ್ಪೋಟ ನಡೆದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಗೆ ಎನ್ಐಎಯ ಮೂವರು ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯ ಪೊಲೀಸರಿಂದ ಘಟನೆಯ ಮಾಹಿತಿ ಪಡೆದರು.
ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ನಡೆದ ಸ್ಥಳ, ಕ್ಯಾಷ್ ಕೌಂಟರ್, ಆರೋಪಿ ಬಂದು ಹೋದ ಮಾರ್ಗ ಹಾಗೂ ಸಿಸಿಟಿವಿಗಳನ್ನ ಪರಿಶೀಲನೆ ನಡೆಸಿದರು. ಬಳಿಕ ಕೆಲ ಹೊತ್ತು ಪ್ರಕರಣದ ಬಗ್ಗೆ ಹೊಟೇಲ್‌ನಲ್ಲಿ ಚರ್ಚೆ ನಡೆಸಿದ ಮೂವರು ಅಧಿಕಾರಿಗಳು, ಹೆಚ್ಎಎಲ್ ಪೊಲೀಸರಿಂದ ಕೆಲವು ಮಾಹಿತಿಗಳನ್ನ ಸಂಗ್ರಹಿಸಿದರು. ಇನ್ನೂ ಸ್ಪೋಟದ ಬಗ್ಗೆ ಸಿಸಿಬಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದು, ಇಂದು ತಮ್ಮ ಬಳಿಯಿದ್ದ ಕೇಸ್ ಫೈಲ್ ಸೇರಿದಂತೆ ಟೆಕ್ನಿಕಲ್ ಎವಿಡೆನ್ಸ್, ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಸಂಪೂರ್ಣ ಮಾಹಿತಿಯನ್ನ ಎನ್ಐಎ ಅಧಿಕಾರಿಗಳ ಜೊತೆ ವಿನಿಮಯ ಮಾಡಿಕೊಂಡಿದ್ದಾರೆ. ಎನ್‌ಐಐ ಅಧಿಕಾರಿಗಳು ತಮ್ಮ ನೆಟ್‌ವರ್ಕ್ ಮೂಲಕ ಶಂಕಿತ ಉಗ್ರನಿಗಾಗಿ ಹುಟುಕಾಟ ಆರಂಭಿಸಿದ್ದಾರೆ.