ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಬುಧಾಬಿಯಿಂದ ಮುಂಬೈಗೆ ಹೊರಟಿದ್ದ ವಿಸ್ತಾರ ಏರ್‌ಲೈನ್ಸ್ (ಯುಕೆ256) (vistara airline flight) ನಲ್ಲಿ ಸೋಮವಾರ ಇಟಲಿಯ ಮಹಿಳಾ ಪ್ರಯಾಣಿಕೆ ಅರೆಬೆತ್ತಲಾಗಿ ಓಡಾಡಿದ್ದಲ್ಲದೇ ಗಲಾಟೆ ನಡೆಸಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ವಿಸ್ತಾರಾ ಏರ್ಲೈನ್ಸ್ ವಿಮಾನದಲ್ಲಿ ಇಟಲಿಯ 45 ವರ್ಷದ ಮಹಿಳೆಯೊಬ್ಬರು ರಂಪಾಟ ನಡೆಸಿ, ವಿಸ್ತಾರಾ ವಿಮಾನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಎಕಾನಮಿ ಕ್ಲಾಸ್ ಟಿಕೆಟ್ ಹೊಂದಿದ್ದ ಪಾವೊಲಾ ಪೆರುಕ್ಕಿಯೋ ಎಂಬಾಕೆ, ಬಿಜಿನೆಸ್ ಕ್ಲಾಸ್ ನಲ್ಲಿ ಕೂರಬೇಕು ಎಂದು ಪಟ್ಟುಹಿಡಿದಿದ್ದಾರೆ. ಅದಕ್ಕೆ ತಡೆಯೊಡ್ಡಿದ ಸಿಬ್ಬಂದಿಯ ಮುಖಕ್ಕೆ ಗುದ್ದಿ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸಿಬ್ಬಂದಿ ಮೇಲೆ ಉಗುಳಿದ್ದಾರೆ. ಬಳಿಕ ವಿಮಾನದಲ್ಲಿ ಅರೆನಗ್ನಳಾಗಿ ಓಡಾಡಿದ್ದಾರೆ.
ವಿಮಾನದ ಸಿಬ್ಬಂದಿಯ ದೂರಿನ ಅನ್ವಯ ಮುಂಬಯಿ ಪೊಲೀಸರು ಆಕೆಯನ್ನು ಬಂಧಿಸಿದ್ದರು. ಆದರೆ ಮುಂಬಯಿ ಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿದೆ.
ಈ ಬಗ್ಗೆ ತನಿಖೆ ಆರಂಭಿಸಿ ವಿಮಾನದ ಸಿಬ್ಬಂದಿ ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ದಾಖಲುಗೊಳಿಸಿ ದಾಖಲೆಯ ಸಮಯದಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಈ ಪ್ರಯಾಣಿಕಳ ವೈದ್ಯಕೀಯ ತಪಾಸಣೆಯ ವರದಿ ಹಾಗೂ ತಾಂತ್ರಿಕ ಸಾಕ್ಷ್ಯ ಚಾರ್ಜ್‌ಶೀಟ್‌ಗೆ (Chargesheet) ದಾಖಲೆ ಒದಗಿಸಿತ್ತು.ಭಾರತೀಯ ದಂಡ ಸಂಹಿತೆಯ ಹಲವು ಸೆಕ್ಷನ್‌ಗಳಡಿ ಆರೋಪಿ ಮಹಿಳೆ ವಿರುದ್ಧ ಜಾಮೀನು ಸಿಗಬಹುದಾದಂತಹ ಪ್ರಕರಣ ದಾಖಲಿಸಲಾಗಿದೆ. ಪ್ರಯಾಣದ ವೇಳೆ ಆಕೆ ಪಾನಮತ್ತಳಾಗಿದ್ದಳು ಎಂದು ವೈದ್ಯಕೀಯ ವರದಿಯಲ್ಲಿ ಮಾಹಿತಿ ಇದೆ ಎಂದು ಡಿಸಿಪಿ ದೀಕ್ಷಿತ್ ಗೆದಮ್ ಹೇಳಿದರು.