ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದು ಕಾಲದಲ್ಲಿ ನಟಿ ರೋಜಾ ಹಾಗೂ ರಮ್ಯಕೃಷ್ಣ ಟಾಲಿವುಡ್‌ನ ಬಹುಬೇಡಿಕೆಯ ನಟಿಯರು. ಪ್ರಸ್ತುತ ರಮ್ಯಕೃಷ್ಣ ಸಿನಿಮಾ ರಂಗದಲ್ಲೇ ಮಿಂಚುತ್ತಿದ್ದರೆ, ರೋಜಾ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಪ್ರವಾಸೋದ್ಯಮ ಸಚಿವೆಯಾದ ನಟಿ ತಿರುಪತಿ ನೋಡಲು ಬಯಸುವ ಸಿನಿಮಾ ನಟ-ನಟಿಯರು, ರಾಜಕೀಯ ವ್ಯಕ್ತಿಗಳಿಗೆ ವ್ಯವಸ್ಥೆ ಮಾಡುತ್ತಿದ್ದಾರೆ. ಹಾಗೆಯೇ ರಮ್ಯಕೃಷ್ಣ ತಮ್ಮ ಪುತ್ರನೊಂದಿಗೆ ತಿರುಪತಿಗೆ ಬಂದು ತಿಮ್ಮಪ್ಪನ ದರುಶನ ಪಡೆದಿದ್ದರು. ಬಳಿಕ ರಮ್ಯಕೃಷ್ಣ ನಗರಿಯಲ್ಲಿರುವ ರೋಜಾ ಅವರ ಮನೆಗೆ ತೆರಳಿ, ಪರಸ್ಪರ ಮಾತುಕತೆ ನಡೆಸಿದರು.
ರಮ್ಯಕೃಷ್ಣ ರೋಜಾ ಮನೆಯಲ್ಲಿ ಸ್ವಲ್ಪ ಸಮಯ ಕಳೆದಿದ್ದಾರೆ. ಹೊರಡುವ ಮುನ್ನ ರೋಜಾ ರಮ್ಯಕೃಷ್ಣಗೆ ಅರಿಶಿನ, ಕುಂಕುಮ, ಹೂವು, ಬಳೆ, ಮತ್ತು ಸೀರೆ ಕೊಟ್ಟು ಕಳಿಸಿದರು. ಅಲ್ಲದೆ, ರೋಜಾ ಅವರೊಂದಿಗಿನ ಫೋಟೋಗಳು ಮತ್ತು ರಮ್ಯಾ ಕೃಷ್ಣ ಅವರಿಗೆ ಸೀರೆ ನೀಡಿದ ವಿಡಿಯೋವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋಗಳನ್ನು ಹಂಚಿಕೊಳ್ಳುವಾಗ ರೋಜಾ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ರೋಜಾ ತಮ್ಮ ಪೋಸ್ಟ್‌ನಲ್ಲಿ.. ಒಳ್ಳೆಯ ಸ್ನೇಹಿತರು ನಕ್ಷತ್ರಗಳಂತೆ ಇರುತ್ತಾರೆ. ಇಂದು ನನ್ನ ಮನೆಗೆ ಬಂದು ನನ್ನನ್ನು ತುಂಬಾ ಸಂತೋಷಗೊಳಿಸಿದ ಸ್ಟಾರ್‌ಗೆ ತುಂಬಾ ಧನ್ಯವಾದ. ಅಂದಿನ ಜೀವನ ಹೇಗಿತ್ತು, ಆ ನಗು, ನಮ್ಮ ಕೆಲಸ ಎಲ್ಲವನ್ನೂ ನೆನಪಿಸಿಕೊಂಡು ಸಮಯ ಕಳೆಯಿತು. ನನ್ನ ಆತ್ಮೀಯರಾದ ರಮ್ಯಾ ಕೃಷ್ಣ ಅವರನ್ನು ಮತ್ತೆ ಸಂಪರ್ಕಿಸಲು ನನಗೆ ತುಂಬಾ ಸಂತೋಷವಾಗಿದೆ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ವೈರಲ್ ಆಗಿದ್ದು, ಇಬ್ಬರ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.