ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬೆನ್ನಲ್ಲೇ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ವಿವಾದ ಸಿಡಿದಿದೆ. ಕೊಲೆಯಾದ ರೇಣುಕಾಸ್ವಾಮಿ ಕುಟುಂಬದ ಪರ ನಿಂತ ನಟಿ ರಮ್ಯಾ ಇದೀಗ ದರ್ಶನ್ ಅಭಿಮಾನಿಗಳ ಅಶ್ಲೀಲ ಮೆಸೇಜ್‌ಗಳ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ, ಅವಮಾನಕಾರಿ ಸಂದೇಶಗಳನ್ನು ಬರೆದಿರುವ ಡಿ ಬಾಸ್ ಫ್ಯಾನ್ಸ್ ವಿರುದ್ಧ ನಟಿ ರಮ್ಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಿನ ಪೋಸ್ಟ್‌ಗಳಲ್ಲಿ ರಮ್ಯಾ, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ದರ್ಶನ್ ಅಭಿಮಾನಿಗಳು ಕಳುಹಿಸಿರುವ ಅಶ್ಲೀಲ ಮೆಸೇಜ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಪ್ರಕಟಿಸಿದ್ದಾರೆ. ತಮಗೆ ಬಂದಿರುವ ಸಂದೇಶಗಳು ಮಹಿಳೆಯರ ವಿರುದ್ಧದ ಹಿಂಸಾತ್ಮಕ ಮನೋಭಾವದ ದ್ರಷ್ಟಾಂತ ಎಂದು ಹೇಳಿದ್ದಾರೆ. “ಇಂಥವರು ಸ್ತ್ರೀಯರ ಹಕ್ಕುಗಳನ್ನು ಪಡೆಯುವ ಹೋರಾಟಕ್ಕೇ ವಿರೋಧ. ಇಂಥವರಿಂದಲೇ ಸಮಾಜದಲ್ಲಿ ಮಹಿಳೆಯರಿಗೆ ಅನ್ಯಾಯವಾಗುತ್ತಿದೆ,” ಎಂದು ರಮ್ಯಾ ಕಿಡಿಕಾರಿದ್ದಾರೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ತಾನು ನ್ಯಾಯದ ಪರ ನಿಂತಿರುವುದರಿಂದ ದರ್ಶನ್ ಅಭಿಮಾನಿಗಳ ಟಾರ್ಗೆಟ್ ಆಗಿದ್ದೇನೆ ಎಂದು ಅವರು ದೂರಿದ್ದಾರೆ. “ಅವರು ಬರೆದಿರುವ ಸಂದೇಶಗಳು ನನಗೆ ಮಾತ್ರವಲ್ಲ, ನನ್ನ ಕುಟುಂಬಕ್ಕೂ ಅಪಾಯ ಉಂಟುಮಾಡಬಹುದು. ಅವರ ಕಮೆಂಟ್‌ಗಳು ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಬೇಕೆಂಬ ಕಾರಣಕ್ಕೆ ಸಾಕ್ಷಿಯಾಗಿವೆ,” ಎಂದು ರಮ್ಯಾ ಹೇಳಿದ್ದಾರೆ.
ಡಿ ಬಾಸ್ ಅಧಿಕೃತ ಫ್ಯಾನ್ ಪೇಜ್ ‘DCompany’ ಕೂಡ ಇತ್ತೀಚೆಗೆ ಪೋಸ್ಟ್ ಮಾಡಿ, ತಮ್ಮ ಅಭಿಮಾನಿಗಳಿಗೆ ಯಾವುದೇ ವಿವಾದಕ್ಕೆ ಕಿವಿಗೊಡಬೇಡಿ, ಪ್ರತಿಕ್ರಿಯಿಸಬೇಡಿ ಎಂದು ಮನವಿ ಮಾಡಿದೆ. ಆದರೆ ಇದಕ್ಕೂ ರಮ್ಯಾ ತೀವ್ರ ವಿರೋಧ ವ್ಯಕ್ತಪಡಿಸಿ, “ಶಾಂತಿಯ ಹೆಸರಿನಲ್ಲಿ ಅಮಾನವೀಯತೆಯನ್ನು ಮರೆಮಾಚಲಾಗದು” ಎಂದು ಹೇಳಿದ್ದಾರೆ.