ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣದಲ್ಲಿ ದಿನದಿಂದ ದಿನಕ್ಕೆ ತನಿಖೆ ಚುರುಕಾಗುತ್ತಿದ್ದು, ಬೆಂಗಳೂರು ಕ್ರೈಂ ಬ್ರ್ಯಾಂಚ್ ಪೊಲೀಸರು ಈಗಾಗಲೇ ನಾಲ್ಕು ಆರೋಪಿಗಳನ್ನು ಬಂಧಿಸಿದ್ದಾರೆ. ನಟಿ ರಮ್ಯಾ ಒಟ್ಟು 48 ಜಾಲತಾಣ ಐಡಿಗಳ ಮಾಹಿತಿ ಪೊಲೀಸರಿಗೆ ನೀಡಿದ್ದು, ಆಧಾರದ ಮೇಲೆ ಈಗ ಆರು ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿವೆ. ಪೊಲೀಸರು ರಾಜ್ಯದ ವಿವಿಧೆಡೆ ದಾಳಿ ನಡೆಸುತ್ತಿದ್ದಾರೆ.
`ಸು ಫ್ರಮ್ ಸೋ’ ಸಿನಿಮಾವನ್ನ ವೀಕ್ಷಿಸಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದದ ನಟ ಪ್ರಜ್ವಲ್ ದೇವರಾಜ್, “ಯಾರ ಫ್ಯಾನ್ಸ್ ಆಗಿದ್ದರೂ ಜವಾಬ್ದಾರಿ ಬೇಕು. ಹೆಣ್ಣುಮಕ್ಕಳಿಗೆ ಕಿರುಕುಳ ಕೊಡುವಂತದ್ದು ಸಹ್ಯವಲ್ಲ. ‘ಸು ಫ್ರಮ್ ಸೋ’ ಸಿನಿಮಾ ಕೂಡ ಇದೇ ಸಂದೇಶವನ್ನು ಕೊಡುತ್ತದೆ. ಧೈರ್ಯವಿದ್ದರೆ ತಲೆ ಎತ್ತಿ ನಿಲ್ಲಲಿ, ಎಲ್ಲ ಚಿಕ್ಕ ಚಿಕ್ಕ ಹುಡುಗರ ಕೈಯಲ್ಲಿ ಮೊಬೈಲ್ ಇದೆ ಅಂತಾ, ಯಾರಿಗೂ ಗೊತ್ತಾಗಲ್ಲ ಎಂಬ ಭಾವನೆಯಿಂದ ಕೆಟ್ಟದಾಗಿ ಮೆಸೇಜ್ ಮಾಡಬಾರದು ಕಾನೂನಿಗೆ ಬಗ್ಗಬೇಕು,” ಎಂದು ಹೇಳಿದ್ದಾರೆ.
ಇದರ ಜೊತೆಗೆ, ಪ್ರಜ್ವಲ್ ಪತ್ನಿ ರಾಗಿಣಿಯವರ ಸಹೋದರಿಗೆ ಅಪರಿಚಿತ ವ್ಯಕ್ತಿಯಿಂದ 280 ಬಾರಿ ಕರೆಗಳು ಹಾಗೂ ಅಶ್ಲೀಲ ಸಂದೇಶಗಳೊಂದಿಗೆ ಫೋಟೋಗಳನ್ನು ಕಳುಹಿಸಿರುವ ಘಟನೆ ಕೂಡ ಬೆಳಕಿಗೆ ಬಂದಿದೆ. ಈ ಬಗ್ಗೆ ನಟ ಪ್ರಜ್ವಲ್ ದೇವರಾಜ್ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. “ಇಂತಹವರ ವಿರುದ್ಧ ಕಾನೂನು ಕ್ರಮ ತೆಗೆದು ಬಿಸಿ ಮುಟ್ಟಿಸಬೇಕು,” ಎಂದು ತಮ್ಮ ಅಸಮಾಧಾನವನ್ನು ಅವರು ವ್ಯಕ್ತಪಡಿಸಿದ್ದಾರೆ.