ರಂಜಾನ್ ಆಚರಣೆ: ಶಾಲಾ ವೇಳಾಪಟ್ಟಿ ಸಡಿಲಿಕೆ ಮಾಡಿ ರಾಜ್ಯ ಸರ್ಕಾರ ಸುತ್ತೋಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಂಜಾನ್ ಆಚರಣೆ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ಶಾಲಾ ವೇಳಾಪಟ್ಟಿ ಸಡಿಲಿಕೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ರಾಜ್ಯದ ಉರ್ದು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಾಲಾ ಅವಧಿ ಬದಲಾವಣೆ ಮಾಡಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಪಾಠದ ಅವಧಿಯಲ್ಲಿ ವ್ಯತ್ಯಯವಾಗಲಿದ್ದು, ಇದನ್ನು ಸರ್ಕಾರಿ ರಜಾ ದಿನಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ಇದರ ಅನುಸಾರ ಈ ಆದೇಶವು ರಂಜಾನ್ ತಿಂಗಳಿಗೆ ಮಾತ್ರ ಅನ್ವಯ ಆಗಲಿದೆ. ಶಾಸಕ ರಿಜ್ವಾನ್ ಅರ್ಷದ್ ಸೇರಿ ಸಮುದಾಯದ ಹಲವು ಮುಖಂಡರ ಮನವಿಯನ್ನು ಸರ್ಕಾರ ಪುರಸ್ಕರಿಸಿದೆ.

2023-24ನೇ ಸಾಲಿಗೆ ನಿಗದಿಪಡಿಸಿರುವ ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರ ಮತ್ತು ಪರೀಕ್ಷಾ ಕರ್ತವ್ಯ ನಿರತ ಉರ್ದು ಮಾಧ್ಯಮದ ಶಿಕ್ಷಕರಿಗೆ ಈ ಆದೇಶವು ಅನ್ವಯಿಸುವುದಿಲ್ಲ ಎಂದು ಸುತ್ತೋಲೆ ಸ್ಪಷ್ಟಪಡಿಸಿದೆ.

ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಚಟುವಟಿಕೆಗಳ ಕ್ರಿಯಾ ಯೋಜನೆ ಅನುಷ್ಠಾನಗೊಳಿಸುವ ಬಗ್ಗೆ ನಿರ್ದೇಶನವಿರುತ್ತದೆ. ಅದರಂತೆ ಶಾಲೆಗಳ ದೈನಂದಿನ ಶೈಕ್ಷಣಿಕ ಚಟುವಟಿಕೆಗಳ ನಿರ್ವಹಣೆಗೆ ಸಲಹಾತ್ಮಕ ವೇಳಾಪಟ್ಟಿಯಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 4.20ರವರೆಗೆ ಶಾಲಾ ಅವಧಿ ನಿಗದಿಪಡಿಸಲಾಗಿರುತ್ತದೆ.

ರಂಜಾನ್ ಮಾಸದ ಪ್ರಯುಕ್ತ ರಾಜ್ಯದಲ್ಲಿನ ಉರ್ದು ಮಾಧ್ಯಮದ ಕಿರಿಯ, ಹಿರಿಯ ಮತ್ತು ಪ್ರೌಢಶಾಲೆಗಳನ್ನು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12.45 ರವರೆಗೆ ರಂಜಾನ್ ತಿಂಗಳು ಪ್ರಾರಂಭವಾದ ದಿನಾಂಕದಿಂದ ಒಂದು ತಿಂಗಳವರೆಗೆ ಮಾತ್ರ ನಡೆಸಲು ಈ ಹಿಂದೆ ದಿನಾಂಕ 31/10/2002ರಲ್ಲಿ ಹೊರಡಿಸಲಾಗಿದ್ದ ಸ್ಟ್ಯಾಂಡಿಂಗ್ ಆರ್ಡರ್ ಅನ್ನು ಯಥಾವತ್ತು ಹೊರಡಿಸಲು ಸ್ವೀಕೃತವಾದ ಮನವಿಗಳನ್ನು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮವಹಿಸುವಂತೆ ಸೂಚಿಸಲಾಗಿರುತ್ತದೆ.

2023-24ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಉರ್ದು ಮಾಧ್ಯಮದ ಕಿರಿಯ, ಹಿರಿಯ ಹಾಗೂ ಪ್ರೌಢಶಾಲೆಗಳು ರಂಜಾನ್ ತಿಂಗಳು ಪ್ರಾರಂಭವಾದ ದಿನಾಂಕದಿಂದ ದಿನಾಂಕ 10/04/2024ರವರೆಗೆ ಮಾತ್ರ ಶಾಲಾ ಅವಧಿಯ ವೇಳಾಪಟ್ಟಿಯ ಬದಲಾವಣೆಯ ವಿವರಗಳು ಎಂದು ಮಾಹಿತಿ ನೀಡಲಾಗಿದೆ.

ಶಾಲಾ ಸಮಯದ ಪಟ್ಟಿ ಇಂತಿದೆ:
ಬೆಳಗ್ಗೆ 8 ಗಂಟೆಯಿಂದ 8.40ರವರೆಗೆ
8.40 ರಿಂದ 9.20 ರವರೆಗೆ
9.20 ರಿಂದ 10.00 ರವರೆಗೆ
10.00 ರಿಂದ 10.15 ರವರೆಗೆ ವಿರಾಮ
10.15 ರಿಂದ 10.55 ರವರೆಗೆ
10.55 ರಿಂದ 11.35 ರವರೆಗೆ
11.35 ರಿಂದ 12.10 ರವರೆಗೆ
12.10 ರಿಂದ 12.45 ರವರೆಗೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!