ಹೊಸ ದಿಗಂತ ವರದಿ, ರಾಣೆಬೆನ್ನೂರು:
ಹಗಲು ಹೊತ್ತಿನಲ್ಲಿ ಚಿರತೆಯೊಂದು ತಾಲೂಕಿನ ಅರೆಮಲ್ಲಾಪುರ-ಚಳಗೇರಿ ಗ್ರಾಮದ ನಡುವಿನ ರಸ್ತೆ ಪಕ್ಕದಲ್ಲಿ ಕಂಡು ಬಂದಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಪ್ರಯಾಣಿಕರೊಬ್ಬರು ಕಾರಿನಲ್ಲಿ ತೆರಳುತ್ತಿರುವಾಗ ರಸ್ತೆ ಪಕ್ಕದಲ್ಲಿ ಚಿರತೆಯನ್ನು ಕಂಡು ಅದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಈ ಸಮಯದಲ್ಲಿ ವಾಹನ ಸವಾರರು ಮತ್ತೊಬ್ಬ ವಾಹನ ಸವಾರರಿಗೆ ಚಿರತೆಯಿದೆ ರಸ್ತೆ ದಾಟಬೇಡಿ ಎಂಬ ಮಾತುಗಳಿವೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಜನರು ಆತಂಕಗೊಂಡಿದ್ದಾರೆ.
ಈ ಕುರಿತು ವಲಯ ಅರಣ್ಯಾಕಾರಿ ಶೆಟ್ಟರ್ ಅವರನ್ನು ವಿಚಾರಿಸಿದಾಗ, ಅರಣ್ಯ ಪ್ರದೇಶದಲ್ಲಿ ಚಿರತೆ ಕಂಡು ಬಂದಿದೆ. ಅದು ಬಹುಶಃ ನೀರು ಕುಡಿಯಲು ತೆರಳುತ್ತಿರುವಾಗ ಜನರ ಕಣ್ಣಿಗೆ ಬಿದ್ದಿದೆ. ಅರಣ್ಯ ಪ್ರದೇಶದಲ್ಲಿರುವ ವನ್ಯ ಜೀವಿಗಳನ್ನು ಸೆರೆ ಹಿಡಿಯಲು ಅವಕಾಶವಿಲ್ಲ. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ರಸ್ತೆ ಪಕ್ಕದಲ್ಲಿ ಜನರು ತೆರಳುತ್ತಿರುವಾಗ ಅವರ ಕಣ್ಣಿಗೆ ಬಿದ್ದಿರಬಹುದು. ಮೇಲಾಗಿ ಅದು ಜನ ವಸತಿ ಪ್ರದೇಶಕ್ಕೆ ನುಗ್ಗಿ ಸಾಕು ಪ್ರಾಣಿಗಳು ಅಥವಾ ಜನರ ಮೇಲೆ ದಾಳಿ ಮಾಡಿಲ್ಲ. ಹೀಗಾಗಿ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.