ಹೊಸದಿಗಂತ ವರದಿ ಹುಬ್ಬಳ್ಳಿ:
29 ವರ್ಷದ ಅಕೀಬ್ ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಐದು ವಿಕೆಟ್ ಪಡೆದು ಮಿಂಚಿದರು. ಈ ಸೀಸನ್‌ನಲ್ಲಿ ಇದು ಅವರಿಗೆ 7ನೇ ಬಾರಿ ಐದು ವಿಕೆಟ್ ಸಾಧನೆ ಎನ್ನುವುದು ವಿಶೇಷ.
ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ 93.3 ಓವರ್‌ಗಳಲ್ಲಿ ಎಲ್ಲಾ 10 ವಿಕೆಟ್ ಕಳೆದುಕೊಂಡು 293 ರನ್‌ಗಳಿಗೆ ಆಲ್ ಔಟ್ ಆಯಿತು. ತಂಡಕ್ಕೆ ಇನ್ನೂ 291 ರನ್ ಹಿನ್ನಡೆ ಇದೆ.
ಮೂರನೇ ದಿನದಾಟದ ಅಂತ್ಯಕ್ಕೆ ಕರ್ನಾಟಕ 5 ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿತ್ತು. ಮಯಂಕ್ ಅಗರವಾಲ್ 207 ಎಸೆತಗಳಲ್ಲಿ 130 ರನ್ ಬಾರಿಸಿ ಕ್ರೀಸ್‌ನಲ್ಲಿ ಅಜೇಯರಾಗಿದ್ದರು. ಅವರಿಗೆ ಕೃತಿಕ್ ಕೃಷ್ಣ 75 ರನ್ ಗಳಿಸಿ ಉತ್ತಮ ಸಾಥ್ ನೀಡಿದ್ದರು.
ಇದನ್ನೂ ಓದಿ:
ನಾಲ್ಕನೇ ದಿನದಾಟದ ಮೊದಲ ಅವಧಿಯಲ್ಲಿ ಕರ್ನಾಟಕ ಉಳಿದ 5 ವಿಕೆಟ್ ಕಳೆದುಕೊಂಡಿತು. ಕೃತಿಕ್ ಕೃಷ್ಣ (36) ಸಾಹಿಲ್ ಲೋತ್ರಾಗೆ ವಿಕೆಟ್ ಒಪ್ಪಿಸಿದರೆ, ವಿದ್ಯಾಧರ ಪಾಟೀಲ (11) ಸುನೀಲ್ ಕುಮಾರ್ ಅವರಿಗೆ ಔಟಾದರು.
ಗುರುವಾರ ಶತಕ ಸಿಡಿಸಿದ್ದ ಮಯಂಕ್ ಅಗರವಾಲ್ ನಾಲ್ಕನೇ ದಿನವೂ ಅದ್ಭುತ ಆಟ ಮುಂದುವರಿಸಿದರು. 443 ನಿಮಿಷ ಕ್ರೀಸ್‌ನಲ್ಲಿ ಕಳೆಯುವ ಮೂಲಕ 260 ಎಸೆತಗಳಲ್ಲಿ 160 ರನ್ ಗಳಿಸಿದ ಅವರು ನಬಿ ಬೌಲಿಂಗ್‌ನಲ್ಲಿ ಎಲ್‌ಬಿ ಔಟ್ ಆದರು. ಪ್ರಸಿದ್ಧ ಕೃಷ್ಣ ಯುಧವೀರಗೆ ಹಾಗೂ ಶಿಖರ್ ಶೆಟ್ಟಿ ನಬಿಗೆ ವಿಕೆಟ್ ಒಪ್ಪಿಸಿದರು.
ಎರಡನೇ ಇನ್ನಿಂಗ್ಸ್ ಆರಂಭಿಸಿದ ಜಮ್ಮು-ಕಾಶ್ಮೀರ 1.2 ಓವರ್‌ಗಳಲ್ಲಿ 10 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದೆ. ಪ್ರಸಿದ್ಧ ಕೃಷ್ಣ ಮೊದಲ ವಿಕೆಟ್ ಪಡೆದರು.



