ಅತ್ಯಾಚಾರ ಆರೋಪಿ ಜಾನಿ ಮಾಸ್ಟರ್​ಗೆ ಜಾಮೀನು ಮಂಜೂರು

ರಾಷ್ಟ್ರಪ್ರಶಸ್ತಿ ವಿಜೇತ ಡ್ಯಾನ್ಸ್ ಕೊರಿಯೋಗ್ರಾಫರ್ ಜಾನಿ ಮಾಸ್ಟರ್​ಗೆ ಷರತ್ತುಬದ್ಧ ತಾತ್ಕಾಲಿಕ ಜಾಮೀನು ಮಂಜೂರಾಗಿದೆ. ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಜಾನಿ ಮಾಸ್ಟರ್ ಅನ್ನು ಕೆ ವಾರದ ಹಿಂದೆ ತೆಲಂಗಾಣ ಪೊಲೀಸರು ಬಂಧಿಸಿದ್ದರು. ಇದೀಗ ಜಾನಿ ಮಾಸ್ಟರ್​ಗೆ ಐದು ದಿನಗಳ ತಾತ್ಕಾಲಿಕ ಜಾಮೀನು ನೀಡಲಾಗಿದ್ದು, ರಾಷ್ಟ್ರಪ್ರಶಸ್ತಿಯನ್ನು ಸ್ವೀಕರಿಸಲೆಂದು ಈ ಜಾಮೀನನ್ನು ನೀಡಲಾಗಿದೆ ಎನ್ನಲಾಗುತ್ತಿದೆ.

ಜಾನಿ ಮಾಸ್ಟರ್ ಅನ್ನು ಅತ್ಯಾಚಾರ ಆರೋಪದಡಿ ಕಳೆದ ತಿಂಗಳು 21ರಂದು ತೆಲಂಗಾಣ ಪೊಲೀಸರು ಬಂಧಿಸಿದ್ದರು. 21 ವರ್ಷದ ಡ್ಯಾನ್ಸರ್ ಒಬ್ಬರು ಜಾನಿ ಮಾಸ್ಟರ್ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ್ದರು, ಯುವತಿಯ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಜಾನಿ ಮಾಸ್ಟರ್ ವಿರುದ್ಧ ಪೋಕ್ಸೋ ಪ್ರಕರಣ ಸಹ ದಾಖಲು ಮಾಡಿದ್ದರು. ಯುವತಿ ನೀಡಿದ್ದ ದೂರಿನಂತೆ ಜಾನಿ ಮಾಸ್ಟರ್ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದಾಗ ಆಕೆಗೆ ವಯಸ್ಸು 16 ಆಗಿತ್ತಂತೆ. ಇದೇ ಕಾರಣಕ್ಕೆ ಜಾನಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಲಾಗಿತ್ತು.

ಇದೀಗ ನ್ಯಾಯಾಲಯವು ಐದು ದಿನಗಳ ಜಾಮೀನನ್ನು ಜಾನಿ ಮಾಸ್ಟರ್​ಗೆ ನೀಡಿದೆ. ಜಾನಿ ಮಾಸ್ಟರ್​ಗೆ ಇತ್ತೀಚೆಗಷ್ಟೆ ರಾಷ್ಟ್ರಪ್ರಶಸ್ತಿ ದೊರೆತಿದ್ದು, ರಾಷ್ಟ್ರಪ್ರಶಸ್ತಿಯನ್ನು ಸ್ವೀಕರಿಸಲು ಮಾತ್ರವೇ ಈ ಜಾಮೀನು ನೀಡಲಾಗಿದೆ. ಅಕ್ಟೋಬರ್ 06 ರಿಂದ 10ರವರೆಗೆ ಜಾನಿ ಮಾಸ್ಟರ್​ಗೆ ಜಾಮೀನು ನೀಡಲಾಗಿದೆ. ಕಳೆದ ವರ್ಷ ಬಿಡುಗಡೆ ಆಗಿದ್ದ ತಮಿಳಿನ ‘ತಿರುಚಿತ್ರಬಲಂ’ ಸಿನಿಮಾದ ಕೊರಿಯೋಗ್ರಫಿಗೆ ಜಾನಿ ಮಾಸ್ಟರ್​ಗೆ ರಾಷ್ಟ್ರಪ್ರಶಸ್ತಿ ನೀಡಲಾಗಿದೆ. ರಾಷ್ಟ್ರಪ್ರಶಸ್ತಿ ವಿತರಣೆ ಸಮಾರಂಭ ಕೆಲವೇ ದಿನಗಳಲ್ಲಿ ನಡೆಯಲಿದ್ದು, ಅದಕ್ಕೆಂದು ಇದೀಗ ಜಾನಿ ಮಾಸ್ಟರ್​ಗೆ ಜಾಮೀನು ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!