ಹೊಸದಿಗಂತ ಡಿಜಿಟಲ್ ಡೆಸ್ಕ್:
ಅತ್ಯಾಚಾರ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಎಸ್ಐಟಿ ಕಸ್ಟಡಿ ಅವಧಿ ಇಂದಿಗೆ ಮುಕ್ತಾಯವಾಗಿದೆ. ಎಸ್‌ಐಟಿ ಅಧಿಕಾರಿಗಳು ಇಂದು ಪ್ರಜ್ವಲ್ ರೇವಣ್ಣನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ಪ್ರಜ್ವಲ್ ವಿರುದ್ಧದ ಇನ್ನೆರಡು ಪ್ರಕರಣಗಳ ತನಿಖೆ ಪೂರ್ಣಗೊಳ್ಳುವವರೆಗೆ ಆತನನ್ನು ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ. ಪ್ರತಿ ಪ್ರಕರಣವನ್ನು ಪ್ರತ್ಯೇಕವಾಗಿ ತನಿಖೆ ನಡೆಸುತ್ತಿರುವ ಎಸ್‌ಐಟಿ ಪ್ರಸ್ತುತ ಹೊಳೆನರಸೀಪುರ ಟೌನ್ ಠಾಣೆ ಪ್ರಕರಣದ ತನಿಖೆ ನಡೆಸುತ್ತಿದೆ. ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರದ ಆರೋಪದ ಮೇಲೆ ಪ್ರಜ್ವಲ್ ವಿಚಾರಣೆ ಹತ್ತು ದಿನಗಳಿಂದ ನಡೆಯುತ್ತಿದೆ.
ಇದೇ ವೇಳೆ ವೈದ್ಯಕೀಯ ಪರೀಕ್ಷೆ ಹಾಗೂ ಧ್ವನಿ ಪರೀಕ್ಷೆ ನಡೆಸಲಾಯಿತು. ಬಳಿಕ ಅಪರಾಧ ನಡೆದ ಸ್ಥಳ ಮಹಜರು ನಡೆದಿದೆ. ಪ್ರಕರಣದ ತನಿಖೆಯನ್ನು ಎಸ್‌ಐಟಿ ಬಹುತೇಕ ಪೂರ್ಣಗೊಳಿಸಿದೆ.
ಇನ್ನೂ ಎರಡು ಪ್ರಕರಣಗಳ ತನಿಖೆ ಈಗಾಗಲೇ ಆರಂಭವಾಗಿದೆ. ಸಿಐಡಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಒಂದು ಪ್ರಕರಣದ ತನಿಖೆಯನ್ನು ಎಸ್‌ಐಟಿ ಆರಂಭಿಸಿದೆ. ಹಾಗಾಗಿ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಪಡೆಯುವಂತೆ ಕೋರುವ ಸಾಧ್ಯತೆ ಇದೆ.