ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯ ಪ್ರದೇಶದಲ್ಲಿ 12 ವರ್ಷದ ಪುಟ್ಟ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಆರೋಪಕ್ಕೆ ಸಂಬಂಧಿಸಿ ಬಂಧಿತರಾಗಿರುವ ಆರೋಪಿಗಳ ಮನೆಯನ್ನು ಸರ್ಕಾರ ಧ್ವಂಸ ಮಾಡಿದೆ.
ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ದೇವಸ್ಥಾನ ಪಟ್ಟಣವಾದ ಮೈಹಾರ್ನಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕ್ರೂರವಾಗಿ ವರ್ತಿಸಿದ ಆರೋಪ ಹೊತ್ತಿರುವ ಇಬ್ಬರ ಮನೆಗಳನ್ನು ಸ್ಥಳೀಯ ಆಡಳಿತ ಶನಿವಾರ ನೆಲಸಮಗೊಳಿಸಿದೆ.
ಆರೋಪಿಗಳಾದ ರವೀಂದ್ರ ಕುಮಾರ್ ಮತ್ತು ಅತುಲ್ ಭಡೋಲಿಯಾ ಗುರುವಾರ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾರೆ.
ಘಟನೆಯ ನಂತರ, ಮೈಹಾರ್ ಮುನ್ಸಿಪಲ್ ಕೌನ್ಸಿಲ್ನ ಮುಖ್ಯ ಮುನ್ಸಿಪಲ್ ಅಧಿಕಾರಿ ಶುಕ್ರವಾರ ಇಬ್ಬರ ಕುಟುಂಬಗಳಿಗೆ ಅವರ ಜಮೀನು ಮತ್ತು ಕಟ್ಟಡಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಕೋರಿ ನೋಟಿಸ್ ಜಾರಿ ಮಾಡಿದ್ದರು ಎಂದು ಪೊಲೀಸ್ ಉಪವಿಭಾಗಾಧಿಕಾರಿ (ಎಸ್ಡಿಒಪಿ) ಲೋಕೇಶ್ ದಬರ್ ತಿಳಿಸಿದ್ದಾರೆ.
ಆರೋಪಿಗಳ ಮನೆಗಳ ನಿರ್ಮಾಣದಲ್ಲಿ ಅಕ್ರಮವೆಸಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದ್ದು, ನಿಯಮಾನುಸಾರ ಇಂದು ಬೆಳಿಗ್ಗೆ ಎರಡೂ ಮನೆಗಳನ್ನು ಕೆಡವಲಾಯಿತು ಎಂದು ದಬರ್ ಹೇಳಿದರು.
ಆರೋಪಿಗಳನ್ನು ಶುಕ್ರವಾರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಗುಪ್ತಾ ತಿಳಿಸಿದ್ದು, ಇಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.