ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೋಲ್ಕತ್ತಾದ ವೈದ್ಯೆ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ಹಾಗೂ ಕೆಲಸದ ಸ್ಥಳದಲ್ಲಿ ಸುರಕ್ಷತೆಗೆ ಒತ್ತಾಯಿಸಿ ಪಶ್ಚಿಮ ಬಂಗಾಳ ಕಿರಿಯ ವೈದ್ಯರ ಆಮರಣಾಂತ ಉಪವಾಸ ಸೋಮವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಶನಿವಾರ ಸಂಜೆಯಿಂದ ಏಳು ಕಿರಿಯ ವೈದ್ಯಾಧಿಕಾರಿಗಳು ಆಮರಣಾಂತ ಉಪವಾಸ ಆರಂಭಿಸಿದ್ದು, ಮ್ಮ ಆಮರಣಾಂತ ಉಪವಾಸ ಸತ್ಯಾಗ್ರಹ ಮುಂದುವರೆದಿದೆ. ರಾಜ್ಯ ಸರ್ಕಾರದಿಂದ ನಮಗೆ ಯಾವುದೇ ಸಂದೇಶ ಬಂದಿಲ್ಲ. ನಮ್ಮ ಎಲ್ಲಾ ಬೇಡಿಕೆಗಳು ಈಡೇರುವವರೆಗೂ ನಾವು ಇದನ್ನು ಧರಣಿ ಮುಂದುವರಿಸುತ್ತೇವೆ. ಯಾವುದೇ ಒತ್ತಡಕ್ಕೆ ಮಣಿದು ನಮ್ಮ ಪ್ರತಿಭಟನೆಯ ಹಾದಿಯಿಂದ ದೂರ ಸರಿಯಲು ಸಾಧ್ಯವಿಲ್ಲ ಎಂದು ಕಿರಿಯ ವೈದ್ಯ ಅನಿಕೇತ್ ಮಹತೋ ಅವರು ತಿಳಿಸಿದ್ದಾರೆ.
ನಗರದ ಧರ್ಮತಾಲಾ ಪ್ರದೇಶದ ಡೋರಿನಾ ಕ್ರಾಸಿಂಗ್‌ನಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳದಲ್ಲಿ ಜೈವಿಕ ಶೌಚಾಲಯ ಸ್ಥಾಪಿಸಲು ಪೊಲೀಸರು ಅನುಮತಿ ನೀಡಿಲ್ಲ. ಕೋಲ್ಕತ್ತಾ ಪೊಲೀಸರು ಸಹಕಾರ ನೀಡುತ್ತಿಲ್ಲ ಎಂದು ಕಿರಿಯ ವೈದ್ಯಾಧಿಕಾರಿಗಳು ಆರೋಪಿಸಿದ್ದಾರೆ.
ಪಾರದರ್ಶಕತೆ ಕಾಯ್ದುಕೊಳ್ಳಲು ಕಿರಿಯ ವೈದ್ಯಾಧಿಕಾರಿಗಳು ತಮ್ಮ ಸಹೋದ್ಯೋಗಿಗಳು ಮುಷ್ಕರ ನಡೆಸುತ್ತಿರುವ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ.
ಹೆಚ್ಚಿನ ಸಂಖ್ಯೆಯ ಜನರು ಮತ್ತು ಕೆಲವು ಗಣ್ಯರು ಪ್ರತಿಭಟನಾ ಸ್ಥಳದಲ್ಲಿ ಜಮಾಯಿಸಿ, ಧರಣಿ ನಿರತ ವೈದ್ಯರಿಗೆ ಬೆಂಬಲ ನೀಡುತ್ತಿದ್ದಾರೆ .