ಹೊಸದಿಗಂತ ಡಿಜಿಟಲ್ ಡೆಸ್ಕ್:
ವ್ಯಕ್ತಿಯೊಬ್ಬ ಹೊಲದಲ್ಲಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿರುವ ಘಟನೆ ಉದಯಪುರದಲ್ಲಿ ನಡೆದಿದೆ.
ಭಾನುವಾರ ಸಂಜೆ 7.30ರ ಸುಮಾರಿಗೆ ಬಾಲಕಿ ಒಬ್ಬಂಟಿಯಾಗಿ ಹೊಲದ ಬಳಿ ಹೋಗಿದ್ದಳು, ಪೊಲೀಸ್ ಅಧಿಕಾರಿ ಹುಕಮ್ ಸಿಂಗ್ ಮಾಹಿತಿ ನೀಡಿ, ಆರೋಪಿಯು ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿದ್ದು, ಆಕೆಯ ಬಾಯಿಯನ್ನು ಮುಚ್ಚಿ, ಹತ್ತಿರದ ಪೊದೆಗೆ ಎಳೆದೊಯ್ದು ಅತ್ಯಾಚಾರವೆಸಗಿದ್ದಾನೆ.
ಬಳಿಕ ಆರೋಪಿ ಪರಾರಿಯಾಗಿದ್ದಾನೆ, ಸಂಕಷ್ಟದಲ್ಲಿದ್ದ ಬಾಲಕಿ ಮನೆಗೆ ತಲುಪಿ ತನ್ನ ಕುಟುಂಬಕ್ಕೆ ಮಾಹಿತಿ ನೀಡಿದ್ದು, ಅವರು ಆಕೆಯನ್ನು ಮಹಾರಾಣಾ ಭೂಪಾಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ ಗ್ರಾಮಸ್ಥರೆಲ್ಲರೂ ದಬೋಕ್ ಪೊಲೀಸ್ ಠಾಣೆಯಲ್ಲಿ ಜಮಾಯಿಸಿ ತ್ವರಿತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಪ್ರತಿಭಟನಾಕಾರರು ಹೆದ್ದಾರಿಯ ಸರ್ವಿಸ್ ರಸ್ತೆಯನ್ನು ನಿರ್ಬಂಧಿಸುವ ಮೊದಲು ಎಸ್‌ಡಿಎಂ, ಪೊಲೀಸ್ ಮತ್ತು ಖಾಸಗಿ ವಾಹನಗಳು ಮತ್ತು ಬಸ್‌ಗಳನ್ನು ಧ್ವಂಸಗೊಳಿಸಿದರು. ಈ ದಿಗ್ಬಂಧನವು ಆ ಪ್ರದೇಶದಲ್ಲಿ ದೀರ್ಘ ಸಂಚಾರ ದಟ್ಟಣೆಗೆ ಕಾರಣವಾಯಿತು.
ಉದ್ವಿಗ್ನ ಪರಿಸ್ಥಿತಿಯನ್ನು ನಿಯಂತ್ರಿಸಲು ಮೂರು ಠಾಣೆಗಳ ಪೊಲೀಸರನ್ನು ನಿಯೋಜಿಸಲಾಗಿದ್ದು, ಜನಸಮೂಹವನ್ನು ಚದುರಿಸಲು ಹರಸಾಹಸ ಪಡಬೇಕಾಯಿತು. ಅಧಿಕಾರಿಗಳು ಇನ್ನೂ ಗ್ರಾಮಸ್ಥರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದಾರೆ.
ವಿಧಿವಿಜ್ಞಾನ ತಂಡಗಳು ಮತ್ತು ಶ್ವಾನ ದಳವು ಘಟನಾ ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಹತ್ತಿರದ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ.