ಹಾಸನದಲ್ಲಿ ಉಳುಮೆ ಮಾಡುವ ವೇಳೆ ಪುರಾತನ ಕಾಲದ ಅಪರೂಪದ ಜೈನ ಮೂರ್ತಿಗಳು ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಗಡಿಭಾಗ ಸುಳುಗೋಡು ಸೋಮವಾರ ಗ್ರಾಮದಲ್ಲಿ ಜಮೀನು ಉಳುಮೆ ಮಾಡುವಾಗ ಜೈನ ತೀರ್ಥಂಕರರ ಸುಂದರ ಕೆತ್ತನೆಯ ಪ್ರತಿಮೆ ಹಾಗೂ ಸ್ಥಂಭ ರೂಪದ ಕಲಾಕೃತಿ ಪತ್ತೆಯಾಗಿದೆ.

ಗ್ರಾಮದ ಮಂಜು ಎಂಬುವವರ ಜಮೀನಿನಲ್ಲಿ ಪುರಾತನ ಕಾಲದ ಅಪರೂಪದ ಕಲಾಕೃತಿ ಕಣ್ಣಿಗೆ ಬಿದ್ದಿದೆ. ಸ್ಥಳೀಯರು ಪುರಾತತ್ವ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಭೂ ಗರ್ಭದಿಂದ ಜೈನಧರ್ಮದ ತೀರ್ಥಂಕರರು ಹಾಗೂ ಸ್ಥಂಭದ ಶಿಲಾ ಕೆತ್ತನೆಯ ಕಲಾಕೃತಿಗಳು ಕಂಡುಬಂದಿರುವುದು ಅಚ್ಚರಿ ಮೂಡಿಸಿದೆ.

40 ವರ್ಷಗಳ ಹಿಂದೆ ಹೇಮಾವತಿ ಜಲಾಶಯ ನಿರ್ಮಾಣವಾದಾಗ ಹಿನ್ನೀರಿನಿಂದ ಮುಳುಗಡೆಯಾದ ಆ ಭಾಗದ ಸುಮಾರು 15 ಗ್ರಾಮಗಳ ಜನರು 1963 ರಿಂದ ಈಚೆಗೆ ಇಲ್ಲಿಗೆ ಬಂದು ವಾಸವಾಗಿದ್ದಾರೆ. ಹಾಗಾಗಿ ಈ ಗ್ರಾಮಕ್ಕೆ ಸಂಬಂಧಿಸಿದ ಐತಿಹಾಸಿಕ ಸಂಗತಿಗಳ ಬಗ್ಗೆ ನಿಖರ ಮಾಹಿತಿ ಯಾರಿಗೂ ತಿಳಿದಿಲ್ಲ.

ಹೀಗಾಗಿ, ಇಲ್ಲಿನ ಶಿಲಾವಶೇಷಗಳ ಬಗ್ಗೆ ವಿವರವಾಗಿ ತಿಳಿಯುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯವರು ಗಮನಹರಿಸಿ ಉತ್ಖನನ ಮಾಡಿ ಸಿಗುವ ಜೈನ ಬಸದಿ, ಬಳಪದ ಕಲ್ಲಿನ ವಿಗ್ರಹ, ಮೂರ್ತಿಗಳು, ಕಲ್ಲಿನ ದೀಪ, ಕೆತ್ತನೆಯ ಕಂಬಗಳು, ನಿಷದಿಗಲ್ಲು ಹಾಗೂ ಶಾಸನ ಕಂಬಗಳು ಮೊದಲಾದ ಶಿಲಾವಶೇಷಗಳನ್ನು ಸಂರಕ್ಷಿಸಿಸಲಿ ಎಂಬುದು ಅನೇಕರ ಮನವಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here