ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಸಿನಿಮಾ ಜಗತ್ತಿನಲ್ಲಿ ನಿರಂತರ ಸುದ್ದಿಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಇದೀಗ ಹೊಸ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ನಟಿಸಿರುವ ಹಾರರ್ ಕಾಮಿಡಿ ಸಿನಿಮಾ ‘ಥಮ’ ದೀಪಾವಳಿಗೆ ಬಿಡುಗಡೆ ಕಾಣುತ್ತಿದೆ. ಇದುವರೆಗೂ ರೊಮ್ಯಾಂಟಿಕ್ ಹಾಗೂ ಡಿ-ಗ್ಲಾಮ್ ಪಾತ್ರಗಳಲ್ಲಿ ಮಿಂಚಿದ್ದ ರಶ್ಮಿಕಾ, ಈ ಬಾರಿ ವಿಭಿನ್ನ ರೀತಿಯ ಪಾತ್ರದಲ್ಲಿ ಪ್ರೇಕ್ಷಕರನ್ನು ರಂಜಿಸಲು ಸಿದ್ಧರಾಗಿದ್ದಾರೆ.
ಮ್ಯಾಡಾಕ್ ಫಿಲ್ಮ್ಸ್ ನಿರ್ಮಿಸಿರುವ ಈ ಚಿತ್ರದಲ್ಲಿ ಆಯುಷ್ಮಾನ್ ಖುರಾನಾ, ನವಾಜುದ್ದೀನ್ ಸಿದ್ದಿಕಿ, ಪರೇಶ್ ರಾವಲ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಆಯುಷ್ಮಾನ್ ಖುರಾನಾ ಅವರು ಅಲೋಕ್ ಎಂಬ ಪಾತ್ರದಲ್ಲಿ ನಟಿಸಿದ್ದು, ಅವರ ಪೋಸ್ಟರ್ನಲ್ಲಿ “ಮಾನವೀಯತೆಯ ಕೊನೆಯ ಭರವಸೆ” ಎಂದು ಬರೆದಿದೆ. ರಶ್ಮಿಕಾ ಮಂದಣ್ಣ ಅವರು ತಡಾಕಾ ಪಾತ್ರವನ್ನು ನಿರ್ವಹಿಸುತ್ತಿದ್ದು, ಈ ಪಾತ್ರ ಚಿತ್ರದ ಹೈಲೈಟ್ ಆಗಿದೆ.
ನವಾಜುದ್ದೀನ್ ಸಿದ್ದಿಕಿ ಅವರ ಯಕ್ಷಾಸನ್ ಲುಕ್ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಪರೇಶ್ ರಾವಲ್ ಅವರ ಪಾತ್ರ ಸಾಮಾನ್ಯ ವ್ಯಕ್ತಿಯ ಸ್ವಭಾವವನ್ನು ಪ್ರತಿಬಿಂಬಿಸುತ್ತದೆ. ಹಾರರ್ ಜೊತೆಗೆ ಕಾಮಿಡಿ ಹಾಗೂ ರೊಮ್ಯಾನ್ಸ್ ಅಂಶಗಳನ್ನು ಒಳಗೊಂಡಿರುವ ಈ ಚಿತ್ರವನ್ನು ಆದಿತ್ಯ ಸರ್ಪೋತ್ದಾರ್ ನಿರ್ದೇಶಿಸಿದ್ದಾರೆ.
ಈಗಾಗಲೇ ಬಿಡುಗಡೆಯಾದ ಪೋಸ್ಟರ್ಗಳು ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಿಸಿವೆ. ಪ್ರತಿ ದೀಪಾವಳಿಗೂ ಹಾರರ್ ಸಿನಿಮಾಗಳು ತೆರೆಗೆ ಬರುತ್ತಿರುವಂತೆಯೇ, ಈ ಬಾರಿಯೂ ಪ್ರೇಕ್ಷಕರಿಗೆ ಹಾರರ್ ಕಾಮಿಡಿ ರಸದೌತಣ ಸಿಗಲಿದೆಯೆಂಬ ನಿರೀಕ್ಷೆ ಇದೆ.
‘ಪುಷ್ಪ 2’, ‘ಅನಿಮಲ್’ ಮುಂತಾದ ಹಿಟ್ಗಳ ನಂತರ ರಶ್ಮಿಕಾ ಮಂದಣ್ಣ ಅವರ ‘ಥಮ’ ಸಿನಿಮಾ ಕೂಡ ಯಶಸ್ಸು ಕಂಡರೆ ಅಚ್ಚರಿಯೇನೂ ಇಲ್ಲ. ವಿಭಿನ್ನ ಶೈಲಿಯ ಪಾತ್ರದೊಂದಿಗೆ ಅವರು ಮತ್ತೊಮ್ಮೆ ಪ್ರೇಕ್ಷಕರ ಹೃದಯ ಗೆಲ್ಲುವ ಸಾಧ್ಯತೆ ಇದೆ.